April 28, 2024

MALNAD TV

HEART OF COFFEE CITY

ಇಸ್ರೇಲ್- ಹಮಾಸ್ ಯುದ್ಧ : ಪೂರ್ತಿ ವಿವರಗಳು

1 min read

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ 2023 ರ ಅಕ್ಟೋಬರ್ 6 ರಂದು ಪ್ರಾರಂಭವಾಗಿ, ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್ ಉಗ್ರರು ಇಸ್ರೇಲ್‌ನ ಜೆರುಸಲೇಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯನ್ನು ಗುರಿಯಾಗಿಸಿಕೊಂಡು ರಾಕೆಟ್ ದಾಳಿ ನಡೆಸಿದ್ದರು. ಇದಕ್ಕೆ ತಿರುಗಿಬಿದ್ದ  ಇಸ್ರೇಲ್ ಗಾಜಾದಲ್ಲಿನ ಹಮಾಸ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತು. ಇದುವರೆಗೆ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದ್ದರೂ, ನಿಜವಾದ ಸಾವಿನ ಸಂಖ್ಯೆ ಹಲವು ಸಾವಿರ ದಾಟಿರುವ ಸಾಧ್ಯತೆ ಇದೆ.

ಈ ಹಿನ್ನಲೆಯಲ್ಲಿ ಸಧ್ಯಕ್ಕೆ ನಡೆಯುತ್ತಿರುವ ಯುದ್ಧ, ಇಸ್ರೇಲ್, ಹಮಾಸ್, ಗಾಜಾ ಪಟ್ಟಿ ಹಾಗೂ ಪ್ಯಾಲಿಸ್ಟೈನ್ ಇತಿಹಾಸ ವನ್ನು ಗಮನಿಸೋಣ.

 

ಈಗಿನ ಯುದ್ಧದ ಮುಖ್ಯ ಕಾರಣಗಳು ಏನು?

  1. ಜೆರುಸಲೇಮ್ ವಿವಾದ:

ಜೆರುಸಲೇಮ್ ಇಸ್ರೇಲ್, ಪ್ಯಾಲೆಸ್ತೀನ್ ಮತ್ತು ಇಸ್ಲಾಂನ ಪವಿತ್ರ ನಗರವಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ವಿವಾದವು ಜೆರುಸಲೇಮ್‌ನ ಮೇಲೆ ಯಾರ ಹಿಡಿತ ಇರಬೇಕು ಎಂಬುದಾಗಿದೆ.

  1. ಅಲ್-ಅಕ್ಸಾ ಮಸೀದಿ ವಿವಾದ:

ಅಲ್-ಅಕ್ಸಾ ಜೆರುಸಲೇಮ್‌ನಲ್ಲಿರುವ ಒಂದು ಮಸೀದಿ. ಇಸ್ರೇಲ್ ಪೊಲೀಸರು ಅಲ್-ಅಕ್ಸಾ ಮಸೀದಿಯಲ್ಲಿ ಭಾಷಣ ಮಾಡಲು ಪ್ರಯತ್ನಿಸುತ್ತಿದ್ದ ಪ್ಯಾಲೆಸ್ತೀನಿಯರನ್ನು ಹೊರಗಟ್ಟಿದ್ದರು. ಮಸೀದಿಯನ್ನು ಅಪವಿತ್ರ ಗೊಳಿಸಿದರು ಎಂದು ಹಮಾಸ್ ದಾಳಿ ನಡೆಸಿತು.

ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್  ಗಡಿ ಇತಿಹಾಸ ಏನು?:

ವೆಸ್ಟ್ ಬ್ಯಾಂಕ್ ಮತ್ತು ಗಾಜಾ, ಪ್ಯಾಲೇಸ್ಟಿನಿಯನ್ ಪ್ರದೇಶಗಳು. ಪೂರ್ವ ಜೆರುಸಲೆಮ್ ಮತ್ತು ಇಸ್ರೇಲ್ ರೋಮನ್ ಕಾಲದಿಂದಲೂ ಪ್ಯಾಲೆಸ್ಟೈನ್ ಎಂದು ಕರೆಯಲ್ಪಡುವ ಭೂಮಿಯ ಭಾಗವಾಗಿದೆ. ಇವುಗಳು ಬೈಬಲ್‌ನಲ್ಲಿ ಯಹೂದಿ ಸಾಮ್ರಾಜ್ಯಗಳ ದೇಶಗಳು ಎಂದು ಉಲ್ಲೇಖಿಸಲಾಗಿದೆ. ಯಹೂದಿಗಳು ಇದನ್ನು ತಮ್ಮ ಪ್ರಾಚೀನ ತಾಯ್ನಾಡು ಎಂದು ಗೌರವಿಸುತ್ತಾರೆ.

ಅದೇ ರೀತಿ ಕ್ರಿಶ್ಚಿಯನ್ನರು ಹಾಗೂ ಮುಸ್ಲೀಮರಿಗೂ ಸಹ ಈ ಜೆರುಸಲೇಮ್ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಶತ ಶತಮಾನಗಳಿಂದ ಅಲ್ಲಿಂದ ಓಡಿಸಲ್ಪಟ್ಟಿದ್ದ ಯಹೂದಿಗಳು ಪ್ರಪಂಚದ ಬೇರೆ ಬೇರೆ ಕಡೆ ಆಶ್ರಯ ಪಡೆದಿದ್ದರು. ತಮ್ಮ ತಾಯ್ನಾಡಿಗೆ ಹಿಂದಿರುಗಬೇಕು, ತಮ್ಮದೇ ಆದ ದೇಶವನ್ನು ತಮ್ಮ ತಾಯ್ನಾಡಿನಲ್ಲಿ  ಸ್ಥಾಪಿಸಬೇಕು ಎಂದು ಹೋರಾಟ ಆರಂಭಿಸಿದ್ದರು.

19ನೇ ಶತಮಾನದ ಅಂತ್ಯದಲ್ಲಿ ಆರಂಭವಾದ ಜಿಯೋನಿಸ್ಟ್ ಚಳವಳಿ ಆಗ ಒಟ್ಟೋಮನ್ ಆಳ್ವಿಕೆಯಲ್ಲಿದ್ದ ಪ್ಯಾಲೇಸ್ಟೈನ್ ನಲ್ಲಿ ಯಹೂದಿಗಳ ಪ್ರತ್ಯೇಕ ದೇಶದ ಹೋರಾಟಕ್ಕೆ ಮುನ್ನುಡಿ ಬರೆಯಿತು. ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್ ಯಹೂದಿಗಳ ಮಾರಣ ಹೋಮ ನಡೆಸಿದ ನಂತರ  ಯಹೂದಿಗಳು ಹೆಚ್ಚಿನ ಪ್ರಮಾಣದಲ್ಲಿ ತಾಯ್ನಾಡಿಗೆ ಮರಳಿದರು. ಕೊನೆಗೆ ಸಾಕಷ್ಟು ಹೋರಾಟದ ಫಲವಾಗಿ  ಇಸ್ರೇಲ್ ಅನ್ನು 1948ರಲ್ಲಿ ದೇಶ ಎಂದು ಘೋಷಿಸಲಾಯಿತು.

ಆದರೆ ಇಸ್ರೇಲ್ ಅಸ್ತಿತ್ವ ಒಪ್ಪಿಕೊಳ್ಳದ  ದೇಶಗಳು ಈ ಭಾಗವನ್ನು ಇನ್ನೂ ಪ್ಯಾಲೆಸ್ಟೈನ್ ಎಂದು ಕರೆಯುತ್ತವೆ.  ವೆಸ್ಟ್ ಬ್ಯಾಂಕ್, ಗಾಜಾ ಮತ್ತು ಪೂರ್ವ ಜೆರುಸಲೆಮ್‌ಗಳನ್ನು ಪ್ಯಾಲೆಸ್ಟೈನ್ ಎಂದು ಕರೆಯಲಾಗುತ್ತದೆ.1948 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಈಜಿಪ್ಟ್ ಇದನ್ನು ವಶಪಡಿಸಿಕೊಂಡ ನಂತರ, 1967 ರವರೆಗೆ ಈಜಿಪ್ಟ್ ನಿಯಂತ್ರಣದಲ್ಲಿತ್ತು. ಆಗ  ನೆರೆಯ ಅರಬ್ ದೇಶಗಳೊಂದಿಗಿನ ಯುದ್ಧದಲ್ಲಿ ಇಸ್ರೇಲ್ ಉಳಿದ ಪ್ಯಾಲೇಸ್ಟಿನಿಯನ್ ಪ್ರದೇಶಗಳನ್ನು ವಶಪಡಿಸಿಕೊಂಡಿತು.

ಹಮಾಸ್ ಎಂದರೇನು?

ಹಮಾಸ್ ಎಂದರೆ ಹರಕಾಹ್ ಅಲ್-ಮುಕ್ವಾಮಾ ಅಲ್-ಇಸ್ಲಾಮಿಯಾ ಎಂಬುದರ ಸಂಕ್ಷಿಪ್ತ ರೂಪ. ಇದರ ಅರ್ಥ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ಮೆಂಟ್.  ಇದು ಗಾಜಾ ಪಟ್ಟಿಯನ್ನು ಆಳುವ ಪ್ಯಾಲೇಸ್ಟಿನಿಯನ್ ಇಸ್ಲಾಮಿ ಉಗ್ರಗಾಮಿ ಗುಂಪು.

ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಆಕ್ರಮಣದ ವಿರುದ್ಧ ಪ್ಯಾಲೇಸ್ಟಿನಿಯನ್ ಚಳುವಳಿ ಪ್ರಾರಂಭವಾದ ನಂತರ ಇದು 1987 ರಲ್ಲಿ ಹುಟ್ಟಿಕೊಂಡಿತು.  ಹಮಾಸ್, ಇಸ್ರೇಲಿ ಆಕ್ರಮಣದ ವಿರುದ್ಧ ಪ್ಯಾಲೆಸ್ಟೀನಿಯನ್ನರನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದೆ . ಈಜಿಪ್ಟ್‌ನಿಂದ ಗಾಜಾವನ್ನು ವಶಪಡಿಸಿಕೊಂಡ 38 ವರ್ಷಗಳ ನಂತರ ಇಸ್ರೇಲಿ ಪಡೆಗಳು ಗಾಜಾದಿಂದ ಹಿಂದೆ ಸರಿದವು. ನಂತರ ಹಮಾಸ್ ಅಲ್ಲಿನ ಚುನಾವಣೆಯಲ್ಲಿ ಗೆದ್ದಿತು.

2007 ರಲ್ಲಿ ಗಾಜಾದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಹಮಾಸ್ ಇಸ್ರೇಲ್‌ನೊಂದಿಗೆ ಅನೇಕ ಯುದ್ಧಗಳನ್ನು ಮಾಡಿದೆ. ಇಸ್ರೇಲ್ ಕೂಡಾ ಹಮಾಸ್ ಮೇಲೆ ವಾಯುದಾಳಿಗಳ ಮೂಲಕ ಪದೇ ಪದೇ ಮರು ಉತ್ತರ ನೀಡಿದೆ.

ಗಾಜಾ ಮೇಲೆ ಆರ್ಥಿಕ ದಿಗ್ಬಂಧನ :

ಗಾಜಾ ಕದನದ ನಂತರ ಹಮಾಸ್ ಗಾಜಾದ ಮೇಲೆ ಹಿಡಿತ ಸಾಧಿಸಿ, ಸರ್ಕಾರ ರಚಿಸಿದರೂ, ಹಿಂಸಾತ್ಮಕ ಚಳವಳಿ ಕೈಬಿಡಲು ಹಾಗೂ ಇಸ್ರೇಲ್ ಗೆ ಮಾನ್ಯತೆ ನೀಡಿ, ಶಾಂತಿ ಸ್ಥಾಪನೆಗೆ ಒಪ್ಪಲಿಲ್ಲ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಈ ಹಿಂದೆ ಇದ್ದ ಸಹಿ ಹಾಕಲು ಕೂಡಾ ಒಪ್ಪಲಿಲ್ಲ.  ಇದರಿಂದ ಇಸ್ರೇಲ್, ಈಜಿಪ್ಟ್  ಹಾಗೂ ಇತರೆ ಕೆಲ ದೇಶಗಳು ಆರ್ಥಿಕ ದಿಗ್ಬಂಧನವನ್ನು ವಿಧಿಸಿ, ಅಲ್ಲಿಗೆ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಸಮುದಾಯದ ವಿದೇಶಿ ಸಹಾಯ ನಿಲ್ಲಿಸಿದವು.

ಹೀಗಾಗಿ  ಗಾಜಾ ಪಟ್ಟಿ  2007 ರಿಂದ ಇಸ್ರೇಲ್ ದಿಗ್ಬಂಧನದಲ್ಲಿದೆ. ಇಸ್ರೇಲ್ ಗಾಜಾದ ವಾಯುಪ್ರದೇಶ, ಸಮುದ್ರವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಗಡಿ ದಾಟಲು ಇರುವ ಒಟ್ಟು ಮೂರು ಸ್ಥಳಗಳಲ್ಲಿ, ಇಸ್ರೇಲ್ ಎರಡನ್ನು ನಿಯಂತ್ರಿಸಿದರೆ, ಮತ್ತೊಂದನ್ನು ಈಜಿಪ್ಟ್ ನಿಯಂತ್ರಿಸುತ್ತದೆ.

ತುರ್ತು ಆರೋಗ್ಯದ ಸಮಸ್ಯೆಗಳಿಗೆ ಬೀಟ್ ಹನೌನ್ ಕ್ರಾಸಿಂಗ್ ಮೂಲಕ ಹಾದುಹೋಗಲು ಇಸ್ರೇಲ್ ಅನುವು ಮಾಡಿಕೊಡುತ್ತದೆ.  ಕಳೆದ 15 ವರ್ಷಗಳಿಂದ ಗಾಜಾದ ಒಳಗೆ ಮತ್ತು ಹೊರಗೆ ಪ್ಯಾಲೆಸ್ಟೀನಿಯರ ಸಂಚಾರ ನಿರ್ಬಂಧಿಸಿದೆ.

ಗಾಜಾ ಪಟ್ಟಿ ಎಂದರೇನು?

ಇಸ್ರೇಲ್, ಈಜಿಪ್ಟ್ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವೆ 41km (25-ಮೈಲಿ) ಉದ್ದ ಮತ್ತು 10km-ಅಗಲದ ಪ್ರದೇಶವನ್ನೇ ಗಾಜಾ ಪಟ್ಟಿ ಎಂದು ಕರೆಯಲಾಗುತ್ತದೆ. ಇದು ಪ್ಯಾಲೆಸ್ಟೀನ್‌ನ ಎರಡು ಪ್ರಾಂತ್ಯಗಳಲ್ಲಿ ಒಂದು. ಇನ್ನೊಂದು ಜೋರ್ಡಾನ್ ನದಿಯ ಪಶ್ಚಿಮ ದಂಡೆ. ಇದರ ಉತ್ತರ ಮತ್ತು ಪೂರ್ವಕ್ಕೆ ಇಸ್ರೇಲ್ ಮತ್ತು ನೈರುತ್ಯಕ್ಕೆ ಈಜಿಪ್ಟ್ ಇದೆ. ಪಶ್ಚಿಮಕ್ಕೆ ಮೆಡಿಟರೇನಿಯನ್ ಸಮುದ್ರದಿಂದ ಗಡಿಯಾಗಿದೆ. ಗಾಜಾ ಪಟ್ಟಿಯ ಮೇಲಿನ ಇಸ್ರೇಲಿ ದಿಗ್ಬಂಧನವು ಪ್ಯಾಲೆಸ್ಟೀನ್-ಇಸ್ರೇಲ್ ಸಂಘರ್ಷಕ್ಕೆ ಕಾರಣವಾಗಿದೆ.

ಗಾಜಾ ಸುಮಾರು 2.3 ಮಿಲಿಯನ್ ಅಂದರೆ 23 ಲಕ್ಷ ಜನರಿಗೆ ನೆಲೆಯಾಗಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆ ಇರುವ ಪ್ರದೇಶ ಕೂಡ ಇದೇ ಆಗಿದೆ. ಇಲ್ಲಿನ ಶೇ. 80 ರಷ್ಟು ಜನ ಸಂಖ್ಯೆ ಅಂತಾರಾಷ್ಟ್ರೀಯ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ. ಗಾಜಾ ಪಟ್ಟಿಯು ಪ್ಯಾಲೆಸ್ಟೀನಿಯನ್ ರಾಷ್ಟ್ರದ ಭಾಗವಾಗಿದೆ ಎಂದು ಪ್ಯಾಲೆಸ್ಟೀನ್ ರಾಷ್ಟ್ರೀಯ ಪ್ರಾಧಿಕಾರವು ವಾದಿಸುತ್ತದೆ. ಇಸ್ರೇಲ್ ಗಾಜಾ ಪಟ್ಟಿಯನ್ನು ತನ್ನದೇ ಆದ ಆಡಳಿತ ಪ್ರದೇಶವೆಂದು ಪರಿಗಣಿಸುತ್ತದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!