May 3, 2024

MALNAD TV

HEART OF COFFEE CITY

ಕರ್ನಾಟಕದ ಕಾಫಿ ಬಿಕ್ಕಟ್ಟಿನಿಂದ ಭಾರತದ ಕಾಫಿ ಕಪ್’ನಲ್ಲಿ ಬಿರುಗಾಳಿ…

1 min read


ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಬಿಸಿ ಕಾಫಿ ಕುಡಿಯದಿದ್ದರೆ ನಮಗೆಲ್ಲ ಏನೋ ಕಳೆದುಕೊಂಡ ಅನುಭವ. ಈಗ ಅಂತಹ ಬಿಸಿ ಬಿಸಿ ಕಾಫಿ ಕಪ್ ನಲ್ಲಿ ಬಿರುಗಾಳಿ ಎದ್ದಿದೆ. ಹವಾಮಾನದ ಸಂಕಟಗಳು, ಆರ್ಥಿಕ ಒತ್ತಡಗಳು ಮತ್ತು ಕಾಫಿ ಬೆಳೆಗಾರರ ಸಮಸ್ಯೆಗಳು ಲಕ್ಷಾಂತರ ಜನರು ಅವಲಂಬಿಸಿರುವ ಕಾಫಿ ಬಟ್ಟಲಲ್ಲಿ ಬಿರುಗಾಳಿ ಎಬ್ಬಿಸಿದೆ.

ಇಳುವರಿ ಕುಸಿತ:

ಭಾರತದ ಕಾಫಿ ಬಿಕ್ಕಟ್ಟಿನ ಕೇಂದ್ರ ಬಿಂದುವಾಗಿರುವ ಕರ್ನಾಟಕ ದೇಶದ ಕಾಫಿ ಉತ್ಪಾದನೆಯಲ್ಲಿ ಶೆ. 71 ರಷ್ಟು ಪಾಲು ಹೊಂದಿದೆ. ದೇಶದಲ್ಲಿ ಸುಮಾರು 250,000 ಕಾಫಿ ಬೆಳೆಗಾರರಿದ್ದು, ಅವರಲ್ಲಿ 98% ಸಣ್ಣ ಬೆಳೆಗಾರರು. ಆದರೆ ಆಘಾತಕಾರಿ ಎನ್ನುವಂತೆ ಕರ್ನಾಟಕದಲ್ಲಿ ಕಾಫಿ ಉತ್ಪಾದನೆ ಶೇ. 20-30% ಕುಸಿತ ಕಂಡಿದೆ. 2023 ರಲ್ಲಿ 43,000 ಮೆಟ್ರಿಕ್ ಟನ್ ಅರೇಬಿಕಾ ಬೀನ್ಸ್‌ ಮುಂಗಾರು ಪೂರ್ವ ಅಂದಾಜಿನಿಂದ ಕುಸಿದಿದೆ. ಕಾಫಿ ಬೆಳೆಯ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳು ಈ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿವೆ.

ರಾಷ್ಟ್ರವ್ಯಾಪಿ ಪರಿಣಾಮ:


ಭಾರತದ ಮೂರು ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸಾಂಪ್ರದಾಯಿಕ ಕಾಫಿ ಬೆಳೆಯುವ ಪ್ರದೇಶವನ್ನು ರೂಪಿಸುತ್ತವೆ. ನೈಋತ್ಯ ಮಾನ್ಸೂನ್‌ನ ತೇವಾಂಶಕ್ಕೆ ತೆರೆದುಕೊಂಡಿರುವ ಅರೇಬಿಕಾ ಮತ್ತು ರೋಬಸ್ಟಾ ಕಾಫಿ (ಅರೇಬಿಕಾ/ರೋಬಸ್ಟಾ ಚೆರ್ರಿ ಎ & ಎಎ) ಅನ್ನು “ಭಾರತೀಯ ಮಾನ್ಸೂನ್ಡ್ ಕಾಫಿ” ಎಂದು ಕರೆಯಲಾಗುತ್ತದೆ. ಭಾರತದ ಒಟ್ಟು ಕಾಫಿ ಉತ್ಪಾದನೆಯು 2023 ರಲ್ಲಿ ಸುಮಾರು 350,000 ಮೆಟ್ರಿಕ್ ಟನ್‌ಗಳನ್ನು ಮುಟ್ಟಿತು. ಇದು ಹಿಂದಿನ ವರ್ಷಗಳಿಗಿಂತ ಗಮನಾರ್ಹ ಕುಸಿತ ಎಂದು ಗಮನಿಸಬೇಕು. ಇತರ ಪ್ರಮುಖ ಕಾಫಿ ಬೆಳೆಯುವ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡುಗಳಲ್ಲಿ ಇಳುವರಿ ಕಡಿಮೆಯಾಗುವುದರೊಂದಿಗೆ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಇಡೀ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ಜಾಗತಿಕ ಪರಿಣಾಮ:


ಭಾರತೀಯ ಕಾಫಿಯನ್ನು ಪ್ರಪಂಚದ ಎಲ್ಲೆಡೆ ನೇರ ಸೂರ್ಯನ ಬೆಳಕುಗಿಂತ ನೆರಳಿನಲ್ಲಿ ಬೆಳೆಯುವ ಅತ್ಯುತ್ತಮ ಕಾಫಿ ಎಂದು ಹೇಳಲಾಗುತ್ತದೆ. ಭಾರತೀಯ ಕಾಫಿಯು ಜಾಗತಿಕ ಉತ್ಪಾದನೆಯ ಕೇವಲ 4.5% ರಷ್ಟಿದೆ. ಈ ಸಂಕಷ್ಟದ ಸನ್ನಿವೇಶ ಜಾಗತಿಕ ಕಾಫಿ ಉತ್ಪಾದನೆಯಲ್ಲಿ 5-7% ಕುಸಿತಕ್ಕೆ ಕಾರಣವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಕಾಫೀ ಬೆಲೆ ಏರಿಕೆಗು ಕಾರಣವಾಗುತ್ತದೆ. ವಿಶ್ವದ ಅತಿದೊಡ್ಡ ಕಾಫಿ ಉತ್ಪಾದಕ ಬ್ರೆಜಿಲ್ ಸಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣವಾಗಿಸಿದೆ. ಕಾಫಿ ಮತ್ತು ಅದರ ಸೇವನೆಯು ನಮ್ಮ ಆರ್ಥಿಕತೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ, ಇದು ಭಾರತದಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಬೆಳೆಗಾರರಿಗೆ ಆದಾಯದ ಪ್ರಾಥಮಿಕ ಮೂಲವಾಗಿದೆ.

ಸಂಕಷ್ಟದಲ್ಲಿ ಬೆಳೆಗಾರರು ಹಾಗೂ ಕಾರ್ಮಿಕರ ಬದುಕು:


ಸಾಂಪ್ರದಾಯಿಕವಾಗಿ ಭಾರತ ಕಾಫಿ ರಫ್ತು ಮಾಡುವ ದೇಶ ಎಂದು ಹೆಸರು ಮಾಡಿದೆ. ಆದರೆ ಈಗ ಇಳುವರಿ ಕೊರತೆಯಿಂದ ರಪ್ತು ಕೂಡ ಕುಸಿತ ಕಂಡು ವಿದೇಶಿ ವಿನಿಮಯ ಮೀಸಲುಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಕರ್ನಾಟಕದಲ್ಲಿ ಸುಮಾರು 600,000 ಜನರು ತಮ್ಮ ಆದಾಯಕ್ಕಾಗಿ ಕಾಫಿ ಕೃಷಿಯನ್ನು ಅವಲಂಬಿಸಿದ್ದಾರೆ. ಉತ್ಪಾದನೆಯ ಕುಸಿತವು ಅವರ ಆರ್ಥಿಕ ಸ್ಥಿರತೆಗೆ ಧಕ್ಕೆ ತಂದಿದೆ. ಅಲ್ಲದೆ ಕಾರ್ಮಿಕರ ಬದುಕನ್ನು ಮತ್ತಷ್ಟು ಬಡತನಕ್ಕೆ ನೂಕುತ್ತಿದೆ.

 

ಸಮಸ್ಯೆಗೆ ಪ್ರಮುಖ ಕಾರಣಗಳು:

1. ಪರ್ಯಾಯ ಬೆಳೆಗಳು ಅಥವಾ ಆರ್ಥಿಕ ಬೆಳೆಗಳ ಹಿಂದೆ ಬಿದ್ದು ಕಾಡನ್ನು ಕಡಿದು ಕೃಷಿ ಭೂಮಿ ಮಾಡಿರುವುದು.

2. ಒಂದು ಕಡೆ ಅಡ್ಡಾದಿಡ್ಡಿ ಮಳೆ, ಮತ್ತೊಂದು ಕಡೆ ಬರಗಾಲದ ಪರಿಣಾಮ ಕಾಫಿ ಗಿಡಗಳು ನಾಶವಾಗುತ್ತಿವೆ. ಏರುತ್ತಿರುವ ತಾಪಮಾನವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿ, ಪೂರ್ತಿ ಬೆಳೆಯ ನಾಶಕ್ಕೆ ಕಾರಣವಾಗಿದೆ.

3. ರಸಗೊಬ್ಬರಗಳು, ಕೀಟನಾಶಕಗಳ ಬೆಲೆಗಳು ಮತ್ತು ಕೃಷಿ ಕಾರ್ಮಿಕರಿಗೆ ಹೆಚ್ಚುತ್ತಿರುವ ಕನಿಷ್ಠ ಕೂಲಿಯು ಕಾಫಿ ಬೆಳೆಗಾರರನ್ನು ಹೆಚ್ಚಿನ ಸಮಸ್ಯೆಗೆ ನೂಕುತ್ತಿದೆ.

4.ಯುವಕರು ಕಾಫಿ ಕೃಷಿ ಲಾಭದಾಯಕವಲ್ಲ ಎಂಬ ಭಾವನೆಯಿಂದ ಇದರ ಕೃಷಿ ಇಂದ ದೂರ ಹೋಗಿ ಬೇರೆ ಉದ್ಯೋಗ ಅರಸುತ್ತಿದ್ದಾರೆ. ಕಾರ್ಮಿಕರ ಕೊರತೆಯು ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

5. ಸರ್ಕಾರದ ಅಸಮರ್ಪಕ ಬೆಂಬಲವು ಕಾಫಿ ಬೆಳೆಗಾರರನ್ನು ಸಾಲದ ಸಂಕಷ್ಟಕ್ಕೆ ನೂಕುತ್ತಿದೆ.

6.ಸರ್ಕಾರ ಕಾಫಿ ಬೆಲೆ ಸ್ಥಿರವಾಗಿರುವಂತೆ ಸೂಕ್ತ ಕ್ರಮ ಜಾರಿ ಗೊಳಿಸಿ, ಸಬ್ಸಿಡಿ ದರದಲ್ಲಿ ರಸಗೊಬ್ಬರ, ಕೀಟನಾಶಕ ಒದಗಿಸಬೇಕಿದೆ.

ಭವಿಷ್ಯದಲ್ಲಿ ಭಾರತಕ್ಕೆ ಸಂಕಷ್ಟ:

ಸಮಸ್ಯೆ ಹೀಗೆ ಮುಂದುವರಿದರೆ, ಪ್ರಮುಖ ಕಾಫಿ ರಫ್ತುದಾರ ದೇಶವಾಗಿರುವ ಭಾರತ ತನ್ನ ಸ್ಥಾನ ಕಳೆದುಕೊಳ್ಳುವ ಅಪಾಯವಿದೆ. ವಿದೇಶಿ ವಿನಿಮಯ ಗಳಿಕೆ ಮತ್ತು ಸ್ಥಳೀಯ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತವೆ. ಗ್ರಾಮೀಣ ಪ್ರದೇಶಗಳಿಂದ ಮತ್ತಷ್ಟು ವಲಸೆ ಹೆಚ್ಚಾಗಿ ಅಪಾಯದ ಸ್ಥಿತಿ ನಿರ್ಮಾಣವಾಗುತ್ತದೆ.

 

ಕಾಫಿ ರೋಗಗಳು:

ಭಾರತ ಕಾಫಿ ಗಿಡಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ರೋಗಗಳೆಂದರೆ ಶಿಲೀಂಧ್ರಗಳ ಬೆಳವಣಿಗೆ. ಈ ಶಿಲೀಂಧ್ರವನ್ನು ಹೆಮಿಲಿಯಾ ವಾಸ್ಟಾಟ್ರಿಕ್ಸ್ ಎಂದು ಕರೆಯಲಾಗುತ್ತದೆ , ಇದು ಎಲೆಯ ವಿಷಯದಲ್ಲಿ ಬೆಳೆಯುವ ಎಂಡೋಫೈಟಸ್ ಅದನ್ನು ತೊಡೆದುಹಾಕಲು ಪರಿಣಾಮಕಾರಿ ಪರಿಹಾರವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಮತ್ತೊಂದು ಪ್ರಚಲಿತ ರೋಗವನ್ನು ಕಾಫಿ ಕೊಳೆತ ಎಂದು ಕರೆಯಲಾಗುತ್ತದೆ , ಇದು ಮಳೆಗಾಲದಲ್ಲಿ ವಿಶೇಷವಾಗಿ ಕರ್ನಾಟಕದ ತೋಟಗಳಿಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ. ಪೆಲಿಕ್ಯುಲೇರಿಯಾ ಕೊಲೆರೋಗಾ ಎಂಬುದು ಈ ಕೊಳೆತ ಅಥವಾ ತುಕ್ಕುಗೆ ನೀಡಲಾದ ಹೆಸರು, ಇದು ಲೋಳೆಯುಕ್ತ ಜಿಲಾಟಿನಸ್ ಫಿಲ್ಮ್ನೊಂದಿಗೆ ಎಲೆಗಳನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ. ಇದನ್ನು ಈಗ ಸೆರಾಟೊಬಾಸಿಡಿಯಮ್ ನಾಕ್ಸಿಯಮ್ ಎಂದು ವರ್ಗೀಕರಿಸಲಾಗಿದೆ ಇದರಿಂದ ಕಾಫಿ ಎಲೆಗಳು ಮತ್ತು ಕಾಫಿ ಹಣ್ಣುಗಳ ಸಮೂಹಗಳು ನೆಲಕ್ಕೆ ಬೀಳುತ್ತವೆ.

ಕಾಫಿನಾಡು ಚಿಕ್ಕಮಗಳೂರು:

ಚಿಕ್ಕಮಗಳೂರಿನ ಕಾಫಿಗೆ ತನ್ನದೇ ಆದ ಇತಿಹಾಸವಿದೆ. ಇಂದಿಗೂ ಇಲ್ಲಿನ ಕಾಫಿ ಅಂದರೆ ದೇಶ, ವಿದೇಶದಲ್ಲಿ ಬೇಡಿಕೆ ಇದೆ. ಕಾಫಿನಾಡು ಅಂದಾಗ ನೆನಪಿಗೆ ಬರೋದು ಚಿಕ್ಕಮಗಳೂರು ಜಿಲ್ಲೆ. ಬಾಬಾ ಬುಡನ್‌ ಎಂಬ ಸಂತನಿಂದ ಚಿಕ್ಕಮಗಳೂರಿಗೆ ಬಂದ ಕಾಫಿ ಇಂದು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ತನ್ನ ಸುವಾಸನೆ ಬೀರಿದೆ. ಆದ್ದರಿಂದ ಮಲೆನಾಡಿನ ಚಿಕ್ಕಮಗಳೂರಿಗೆ ಕಾಫಿನಾಡು ಅಂತನೇ ಕರೆಯುತ್ತಾರೆ. ಕಾಫಿನಾಡಿನ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ ಕೀರ್ತಿ ‘ಕೆಫೆ ಕಾಫಿ ಡೇʼ ಸಂಸ್ಥಾಪಕ, ದಿವಂಗತ ಸಿದ್ದಾರ್ಥ್‌ ಹೆಗಡೆ ಅವರು. ಕಾಫಿ ಸಾಮ್ರಾಜ್ಯವನ್ನ ಕಟ್ಟಿದ್ದ ಅವರು ಜಗತ್ತಿಗೆ ಚಿಕ್ಕಮಗಳೂರು ಕಾಫಿಯ ರುಚಿ ಎಂತಹದ್ದು ಎಂದು ತೋರಿಸಿಕೊಟ್ಟವರು.

ಇಂದಿಗೂ ಚಿಕ್ಕಮಗಳೂರಿಗೆ ಎಂಟ್ರಿ ಆಗುತ್ತಲೇ ಕಾಫಿ ತೋಟಕ್ಕೆ ಹೋದಂತಹ ಅನುಭವವನ್ನು ನೀಡುತ್ತದೆ. ಇಂದಿಗೂ ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಚಿಕ್ಕಮಗಳೂರಿನ ಕೃಷಿಕರು ಕಾಫಿ ಬೆಳೆಯನ್ನು ಬೆಳೆಯುತ್ತಾ ಬಂದಿದ್ದಾರೆ. ಇಂದಿಗೂ ಅದೆಷ್ಟೋ ಕಾಫಿ ಅಂಗಡಿಗಳು, ಮಳಿಗೆಗಳನ್ನು ನಾವು ಚಿಕ್ಕಮಗಳೂರಿನಲ್ಲಿ ಕಾಣಬಹುದಾಗಿದೆ. ರಸ್ತೆ ಬದಿ, ಮನೆಗಳಲ್ಲೂ ಕಾಫಿ ಪುಡಿ ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗೆ ಚಿಕ್ಕಮಗಳೂರಿನಿಂದ ದೇಶ, ವಿದೇಶಗಳಿಗೂ ಕಾಫಿ ರಫ್ತು ಆಗುತ್ತಲೇ ಇದೆ. ಒಟ್ಟಿನಲ್ಲಿ ಚಿಕ್ಕಮಗಳೂರು ಕಾಫಿ ಎಂದರೆ ಟೇಸ್ಟ್‌ಗೆ ಇನ್ನೊಂದು ಹೆಸರು ಅನ್ನೋ ಹಾಗಾಗಿದೆ. ಆದ್ರೂ ಕೂಡ ಜಿಲ್ಲೆಯಲ್ಲಿ ನಾನಾ ಕಾರಣಗಳಿಂದ ಉತ್ಪಾದನೆಯ ಪ್ರಮಾಣದಲ್ಲಿ ಕುಂಠಿತವಾಗಿದೆ. 

ಮಲೆನಾಡು ಕಾಫಿ ತೋಟದ ಸಮಸ್ಯೆಗಳು :

1. ಹವಾಮಾನ ಬದಲಾವಣೆ, ಇಳುವರಿ ಕುಂಠಿತ
2. ಕೂಲಿ ಕಾರ್ಮಿಕರ ಸಮಸ್ಯೆ
3. ಬೆಂಬಲಬೆಲೆ ಸಿಗದೆ ಇರುವುದು
4. ಅಕಾಲಿಕ ಮಳೆ
5. ಕಾಡುಪ್ರಾಣಿ ಹಾವಳಿ
6. ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ ಕಷ್ಟ
7. ಕಾಫಿ ಕೊಯ್ಲು, ಗಿಡ ಕಸಿಗೆ ತಂತ್ರಜ್ಞಾನ ಬಳಕೆ ಸಾಧ್ಯವಾಗದೆ ಇರುವುದು
8. ಕೌಶಲ್ಯಯುತ ಕಾರ್ಮಿಕರ ಕೊರತೆ
9. ಅರಣ್ಯ ಇಲಾಖೆ ಮತ್ತು ಕಂದಾಯ ನಡುವಿನ ಸಂಘರ್ಷ
10. ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಯ ನಕ್ಷೆಯನ್ನು ಸರಿಯಾಗಿ ಗುರುತಿಸದೆ ಇರುವುದು
11. ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಭದ್ರತೆ ಇಲ್ಲದೆ ಇರುವುದು

ಪರಿಹಾರಗಳೇನು?
1. ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಮಟ್ಟದಲ್ಲಿ ಸೂಕ್ತ ಯೋಜನೆ.
2. ಹವಾಮಾನ ಅಧ್ಯಯನ ಮಾಹಿತಿಗೆ -ಸ್ಮಾರ್ಟ್ ತಂತ್ರಜ್ಞಾನ ಅಳವಡಿಕೆ.
3. ಕಾಫಿ ಬೆಳೆಗಾರರಿಗೆ ನ್ಯಾಯಯುತ ಬೆಲೆ.

ಇಂತಹ ಮಾರ್ಗೋಪಾಯಗಳ ಮೂಲಕ ತಕ್ಷಣವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲದೆ ಹೋದಲ್ಲಿ ಕಾಫಿ ಬೆಳೆಗಾರರ ಕಾಫಿ ಬಟ್ಟಲಿನ ಬಿರುಗಾಳಿ ಮಟ್ಟಷ್ಟು ದಟ್ಟವಾಗುವುದರಲ್ಲಿ ಅನುಮಾನವಿಲ್ಲ.

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!