May 3, 2024

MALNAD TV

HEART OF COFFEE CITY

“ಚಾಕೃತಿಯಲ್ಲಿ ಮೂಡಿಬಂದ ರಾಮಲಲ್ಲಾ ಆಕೃತಿ”

1 min read

ಕಲಾವಿದನ ಕೈ ಕುಂಚದಲ್ಲಿ ಅರಳಿದ ಅತ್ಯದ್ಭುತವಾದ ಕಲಾಕೃತಿಗಳನ್ನು ನೋಡುಗರನ್ನು ಬೇರಾಗಿಸುತ್ತವೆ ಇಂತಹ ಅದ್ಭುತ ಕಲಾವಿದರ ಕಲಾಕೃತಿಗಳು ನಮ್ಮ ನಾಡು, ನುಡಿ, ಸಂಸ್ಕೃತಿ, ಪರಂಪರೆ ಇತಿಹಾಸವನ್ನು ತಮ್ಮ ಅಸಾಧಾರಣ ಕಲೆಯ ಮೂಲಕ ಅಭಿವ್ಯಕ್ತಿಸಿರುವುದು ನಿಜಕ್ಕೂ ಅದ್ಭುತವೇ ಸರಿ.

ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇದರ ಹಿನ್ನೆಲೆಯಲ್ಲಿ ಸೂಕ್ಷ್ಮ ಶಿಲ್ಪಿ ಕಲಾವಿದ ಸಚಿನ್ ಸಾಂಘೆ ಎಂಬುವವರು ಚಾಕ್ ಪೀಸ್ ಬಳಸಿ ರಾಮಮೂರ್ತಿ ಕಲಾ ಕೃತಿ ರಚಿಸಿದ್ದಾರೆ. ಈಗಾಗಲೇ ಹಲವು ಕಲಾ ಕೃತಿಗಳು ಸೃಷ್ಟಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸೂಕ್ಷ್ಮ ಶಿಲ್ಪಿ ಕಲಾವಿದ ಸಚಿನ್ ಸಾಂಘೆ ಹೀಗೆ ಕೈಯಲ್ಲಿ ಚಾಕ್ ಪೀಸ್ ಹಿಡಿದು ಗುಂಡು ಪಿನ್ನುಗಳ ಮೂಲಕ ಕರಗತವಾದ ಕಲೆಯನ್ನು ಅಷ್ಟೇ ನಾಜೂಕಾದ ರೀತಿಯಲ್ಲಿ ಕೆತ್ತನೆ ಮಾಡಿ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಶಾಲೆಗೆ ಹೋಗುವಂತಹ ಸಂದರ್ಭದಿಂದಲೂ ಕೈಗೆ ಏನೇ ಸಿಕ್ಕರು ಅದಕ್ಕೆ ಒಂದು ರೂಪ ಕೊಡುವುದು ಇವರ ಹವ್ಯಾಸ, ಆ ಹವ್ಯಾಸ ಖುಷಿಗಾಗಿ ಕಲಾ ಕೃಷಿಗಾಗಿ ಮುಂದುವರೆದಿದ್ದು, ಇನ್ನು ಈ ಚಾಕ್ ಪೀಸ್ ಮೂಲಕ ಅನೇಕ ದೇವಶಿಲ್ಪಗಳ ಕೆತ್ತನೆ ಮಾಡಿದ್ದಾರೆ. ಇಂದು ವಿಶೇಷವಾಗಿ ಇವರ ಕೈಚಳಕದಲ್ಲಿ ಅರಳಿದ ದೈವ ರಾಮಲಲ್ಲಾ.

ಗೌರಿಬಿದನೂರು ತಾಲೂಕು, ಮುದುಗೆರೆ ಮೂಲದವರಾದ ಇವರು ಸಾಫ್ಟ್ವೇರ್ ಇಂಜಿನಿಯರಿಂಗ್ ವೃತ್ತಿಯನ್ನು ಮಾಡುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ವಿಭಿನ್ನ ಚಾಕ್ ಕಲಾ ಕೃತಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಇದ್ದ ಆಸಕ್ತಿ ಹೆಮ್ಮರವಾಗಿ ಬೆಳೆದು ಇದ್ದು ರಾಷ್ಟ್ರದಾದ್ಯಂತ ಗುರುತಿಸಿಕೊಳ್ಳುವಂತ್ತೆ ಮಾಡಿದೆ. ಅಂದು ಅವರ ಕೈ ಕುಂಚದಲ್ಲಿ ಚಾಕ್ ಪೀಸ್ ನ ಮೂಲಕ ಅರಳಿದ ಕಲಾಕೃತಿಗೆ ‘ಚಾಕೃತಿ’ ಎಂಬ ನಾಮಧೇಯವನ್ನು ಇಟ್ಟಿದ್ದಾರೆ.

ದೇವಾನುದೇವತೆಗಳಿಂದ ಹಿಡಿದು ಗಣ್ಯ ವ್ಯಕ್ತಿಗಳು, ಸ್ಮಾರಕಗಳು, ಐತಿಹಾಸಿಕ ಸ್ಥಳಗಳ ಕೆತ್ತನೆಗಳನ್ನ ಮಾಡಿದ್ದಾರೆ, ಅದರಲ್ಲಿ ಹಂಪಿಯ ಕಲ್ಲಿನ, ರಥ ಮೈಸೂರಿನ ಜಂಬೂ ಸವಾರಿ ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಹಲವಾರು ಕಲಾ ಕೃತಿಗಳನ್ನು ರಚಿಸಿದ್ದಾರೆ.

ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಮುದ್ದು ಮೊಗದ 6 ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಿದ್ದು, ಒಂದು ಮೂರ್ತಿಯು ಸುಮಾರು ಮುಕ್ಕಾಲು ಇಂಚು ಇದೆ. ಇದನ್ನು ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಅಯೋದ್ಯೆಗೆ ತಲುಪಿಸಲು ಸಿದ್ಧತೆ ಮಾಡಲಾಗಿದ್ದು, ಪ್ರಾಣ ಪ್ರತಿಷ್ಠಾಪನೆಗೆ ಬರುವಂತಹ ಗಣ್ಯರಿಗೆಉಡುಗೊರೆಯಾಗಿ ಈ ಮೂರ್ತಿಗಳನ್ನ ಕೊಡಲಿದ್ದಾರೆ ಎಂಬ ಮಾಹಿತಿ ಇದೆ.

ಸುಮಾರು 15 ದಿನಗಳಿಂದ ಸತತವಾಗಿ ಒಂದೇ ತರದ ಆರು ಬಾಲರಾಮನ ಕಲಾಕೃತಿಗಳನ್ನು ಕೆತ್ತಿದ್ದು, ಹತ್ತರಿಂದ ಹನ್ನೆರಡು ಗಂಟೆ ಒಂದು ಕಲಾಕೃತಿಯ ಕೆತ್ತನೆಗೆ ಸಮಯ ಹಿಡಿದಿದೆ. ಇದೆಲ್ಲವೂ ಶ್ರೀ ರಾಮನ ಕೃಪೆಯಿಂದ ಮಾತ್ರ ಸಾಧ್ಯ, ಹೆಮ್ಮೆಯ ವಿಷಯ ಕೂಡ ಹೌದು ಇದು ಜೀವಮಾನದ ಘಟನೆಯಾಗಿ ಮನಸ್ಸಿನಲ್ಲಿ ಅಚ್ಚುಳಿಯುತ್ತದೆ ಇದಕ್ಕೆ ಧನ್ಯತಾಭಾವವಿದೆ. ರಾಮ ಮಂದಿರ ಮಾಡಬೇಕೆಂಬ ನೀಲಿ ನಕ್ಷೆ ಇಟ್ಟುಕೊಂಡಿದ್ದೆ, ಆದರೆ ಸಮಯದ ಅಭಾವ ಇದ್ದಿದ್ದರಿಂದ ಕೆಲಸದ ಬಿಡುವಿನ ವೇಳೆಯಲ್ಲಿ ಈ ರಾಮಲಲ್ಲಾ ಮೂರ್ತಿಯನ್ನು ಮಾಡಲು ಸಾಧ್ಯವಾಯಿತಷ್ಟೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ನಾನು ನನ್ನ ಕಲೆಯ ಮುಖಾಂತರ ಭಾಗವಹಿಸುತ್ತಿರುವುದು ತುಂಬಾ ಖುಷಿ ಇದೆ ಇದೆಲ್ಲವೂ ರಾಮನ ಕೃಪೆ ಅಂದಿದ್ದಾರೆ ಸಚಿನ್ ಸಾಂಘೆ.

ಸ್ವ ಇಚ್ಛೆಯಿಂದ ಕಲಿತಿರುವ ಕಲೆ ಇದು. ಅವರು ಇಷ್ಟಪಡುವಂತಹ ವ್ಯಕ್ತಿಗಳನ್ನ ಭೇಟಿ ಮಾಡಿ ಉಡುಗೊರೆಯಾಗಿ ಈ ಕಲಾಕೃತಿಗಳನ್ನು ನೀಡುವಂತಹ ಹವ್ಯಾಸವನ್ನು ರೂಡಿಸಿಕೊಂಡಿದ್ದಾರೆ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ನರೇಂದ್ರ ಮೋದಿ, ರಾಮನಾಥ ಕೋವಿಂದ್, ಪ್ರಣವ್ ಮುಖರ್ಜಿ, ಶಿವರಾಜ್ ಕುಮಾರ್, ವೆಂಕಯ್ಯ ನಾಯ್ಡು, ಹೀಗೆ ಹಲವಾರು ಗಣ್ಯರನ್ನ ಭೇಟಿ ಮಾಡಿ ಅವರ ಮೂರ್ತಿಗಳನ್ನ ಕೆತ್ತಿ ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರಿಗೆ ಅವರ ಮೂರ್ತಿಯನ್ನೇ ನೀಡಿದ್ದು ಬಹಳ ಅವಿಸ್ಮರಣೆ ಎಂದು ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರಿಗೆ ಯುವ ಜೈನ ಪ್ರಶಸ್ತಿಯನ್ನು ಸಹ ನೀಡಲಾಗಿದೆ.

ಯಾವ ಕಲ್ಲು ಶಿಲೆಯಾಗುತ್ತದೆ ಎಂಬುದು ಶಿಲ್ಪಿಗೆ ತಿಳಿದಿರುತ್ತದೆ ಹಾಗೆ ಇವರು ಕೂಡ ಬಳಪದ ಕಲ್ಲನ್ನು ಕೂಡ ಆಯ್ಕೆ ಮಾಡುವಾಗ ನೋಡಿ ಆಯ್ಕೆ ಮಾಡುತ್ತಾರೆ. ಅದರ ಮೇಲ್ಮೈ ನೋಡಿದಾಗಲೇ ಅದರ ಗುಣಮಟ್ಟ ತಿಳಿಯುತ್ತದೆ ಆ ಸಂದರ್ಭದಲ್ಲಿಯೇ ಇದು ಮೂರ್ತಿ ಕೆತ್ತನೆಗೆ ಅಥವಾ ಯಾವುದೋ ಒಂದು ಶಿಲ್ಪದ ಕೆತ್ತನೆಗೆ ಇದು ಯೋಗ್ಯವೇ ಇಲ್ಲವೇ ಎಂದು ಅಲ್ಲೇ ನಿರ್ಧರಿಸುತ್ತಾರೆ. ಅವರು ಮಾಡಿರುವಂತಹ ಶೇಕಡ 90ರಷ್ಟು ಕಲಾಕೃತಿಗಳು ಒಂದೇ ಪ್ರಯತ್ನದಲ್ಲಿ ಮುಗಿದಿದೆ ಎಂಬುದು ಅಚ್ಚರಿಯ ವಿಷಯವೇ ಸರಿ.

ಸಚಿನ್ ಸಾಂಘೆ ಅವರು ಚಾಕ್ ಪೀಸ್ ಮಾತ್ರವಲ್ಲದೆ ಪೆನ್ಸಿಲ್ ನಲ್ಲೂ ಕೂಡ ಕಲಾಕೃತಿ ಮಾಡಿದ್ದಾರೆ. ಪ್ರತಿಯೊಂದು ಕಲೆಯು ಕ್ಲಿಷ್ಟಕರವಾಗಿದ್ದು, ಒಂದೊಂದು ಕಲೆಯಲ್ಲೂ ಕೂಡ ಅದರದೇ ಆದ ಅನುಕೂಲ ಮತ್ತು ಅನಾನುಕೂಲಗಳಿರುತ್ತದೆ. ಯಾವುದೇ ಕಲೆಯಾಗಲಿ ಹಂತ ಹಂತವಾಗಿ ಕಲಿಯುವುದರ ಮೂಲಕ ಕರಗತ ಮಾಡಿಕೊಂಡಾಗ ಮಾತ್ರ ಉತ್ತಮವಾದ ಪ್ರತಿಫಲ ಹೊರಬರುತ್ತದೆ ಇದಕ್ಕೆಲ್ಲ ಮನಸ್ಸಿನ ಇಚ್ಛೆ ಇರಬೇಕು ಅಷ್ಟೇ.
ಒಟ್ಟಾರೆ ಎಲೆ ಮರೆಯ ಕಾಯಿಯಂತೆ ಇಂತಹ ಕಲೆಗಳು ಮರೀಚಿಕೆಯಾಗಿದೆ. ಎಲ್ಲೆಡೆ ಈ ಕಲೆ ಮುನ್ನೆಲೆಗೆ ಬರಲಿ, ಇದು ಕಲಿಕೆಗೆ ಎಷ್ಟು ನಾಜೂಕಾದ ಕಷ್ಟದ ಕೆಲಸವೂ ಅಷ್ಟೇ ಬೋಧಿಸುವುದಕ್ಕೂ ಕಷ್ಟಕರವಾಗಿದೆ. ಈ ವಿಭಿನ್ನ ಕಲೆಯು ನಿಂತ ನೀರಾಗದೆ ಹರಿಯುವ ನೀರಾಗಿ ಇನ್ನಷ್ಟು ಆಸಕ್ತ ವಿದ್ಯಾರ್ಥಿಗಳ ಮೂಲಕ ‘ಚಾಕೃತಿ’ ಕಲೆಯು ಪ್ರಜ್ವಲಿಸಲಿ ಎಂಬುದು ನಮ್ಮ ಆಶಯ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!