May 11, 2024

MALNAD TV

HEART OF COFFEE CITY

ಪತ್ರಿಕೆಯ ಪ್ರತಿಯೊಂದು ಪದವು ಸತ್ಯ ಮತ್ತು ನಿತ್ಯವಾಗಿರಬೇಕು – ಶಾಸಕ ಕೆ.ಎಸ್.ಆನಂದ್

1 min read

ಬೀರೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದೆ, ಸಮಾಜದ ಆಗುಹೋಗುಗಳ ಜನರಿಗೆ ತಿಳಿಸುವ ಕಾರ್ಯ ಪತ್ರಕರ್ತರದ್ದು, ಇತ್ತೀಚೆಗೆ ಪತ್ರಿಕೋದ್ಯಮ ಗಟ್ಟಿಯಾಗಿ ನೆಲೆ ನಿಂತಿದೆ ಎಂಬುದರ ಹಿಂದೆ ಪತ್ರಕರ್ತರ ಪಾತ್ರ ಮಹತ್ವದು ಎಂದು ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲ್ಲೂಕು ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ಮುದ್ರಣ ವ್ಯವಸ್ಥೆಯಲ್ಲಿ ಪತ್ರಿಕೆಗಳನ್ನು ಹೊರತರುವುದು ಕಷ್ಟಕರವಾಗಿತ್ತು. ಈಗ ತಂತ್ರಜ್ಞಾನ ಮುಂದುವರೆದಿದ್ದು, ಒಳ್ಳೆಯ ವ್ಯವಸ್ಥೆಯಲ್ಲಿ ಮುದ್ರಣ ಮಾಧ್ಯಮ ನಡೆಯುತ್ತಿದೆ. ದೇಶದ ನಾಲ್ಕನೇ ಅಂಗ ಪತ್ರಿಕಾರಂಗ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ತಮ್ಮ ಶಕ್ತಿಯನ್ನು ವೃದ್ದಿಸಿಕೊಳ್ಳಬೇಕಿದೆ ಎಂದರು.
ಪತ್ರಿಕೆಗಳ ಸುದ್ದಿ ಸದ್ದು ಮಾಡಬೇಕು, ಬುದ್ದಿ ಹೇಳುವಂತಿರಬೇಕು, ತಿದ್ದಿಕೊಳ್ಳುವಂತಿರಬೇಕು. ಪತ್ರಿಕೆಯ ಪ್ರತಿಯೊಂದು ಪದವು ಸತ್ಯ ಮತ್ತು ನಿತ್ಯವಾಗಿರಬೇಕು. ದಿನಪತ್ರಿಕೆಯ ಪಾತ್ರ ವಿಶ್ವವಿದ್ಯಾನಿಲಯದ ವಿಶ್ವಕೋಶವಿದ್ದಂತೆ, ಸಮಸ್ತ ಸುದ್ದಿಗಳು ಸಮುದ್ರವಿದ್ದಂತೆ ಪತ್ರಕರ್ತರು ವಸ್ತು ನಿಷ್ಠವರದಿಗಳನ್ನು ನೀಡಿ ಸಮಾಜದ ಪರವಾಗಿ ಧ್ವನಿ ಎತ್ತಿದಾಗ ಮಾತ್ರ ಹಿಡಿದ ಲೇಖನಿಗೆ ಬೆಲೆ ತೆತ್ತಂಗಾಗುತ್ತದೆ ಎಂದರು.
ಪತ್ರಿಕಾರಂಗದಲ್ಲಿ ಸಾಕಷ್ಟ ಬದಲಾವಣೆಗಳು ಆಗಿದೆ. ದೃಶ್ಯಮಾಧ್ಯಮದೊಂದಿಗೆ ಮುದ್ರಣ ಮಾಧ್ಯಮ ಪೈಪೋಟಿ ನಡೆಸಬೇಕಿದೆ. ಪತ್ರಿಕೆಗಳು ಸ್ವಾರಸ್ಯಕರವಾಗಿ ಸುದ್ದಿಗಳನ್ನು ತಿಳಿಸುವ ಕಾರ್ಯ ಮಾಡಲಿದೆ. ಪ್ರಸ್ತುತ ಪತ್ರಿಕಾಧರ್ಮವು ಇಲ್ಲದಾಗಿ ವ್ಯಾಪಾರ ಧರ್ಮವಾಗಿ ಮಾರ್ಪಟ್ಟಿರುವುದು ವಿಪರ್ಯಾಸ. ಸರಕಾರದಿಂದ ನಿವೇಶನಗಳನ್ನು ಪಡೆಯುವುದು ಕಷ್ಟಕರವಾಗಿದೆ. ಅವಕಾಶವಿದ್ದರೆ ತಾಲ್ಲೂಕಿನ ಪತ್ರಕರ್ತರಿಗೆ ಅದ್ಯತೆಯ ಅನುಗುಣವಾಗಿ ನಿವೇಶನವನ್ನು ದೊರಕಿಸಿಕೊಡಲು ತಹಸೀಲ್ದಾರ್ ಬಳಿ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುತ್ತದೆ. ಬಹು ಮುಖ್ಯ ಬೇಡಿಕೆಯಾದ ಪಟ್ಟಣದ ಕನ್ನಡ ಕಲಾಸಂಘದ ಕಟ್ಟಡವನ್ನು ತಾಲ್ಲೂಕಿನ ಪತ್ರಕರ್ತರಿಗೆ ನೀಡಲು ಮೊದಲ ಆದ್ಯತೆ ನೀಡಲಿದ್ದು, ಜೊತೆಗೆ ಪಟ್ಟಣದಲ್ಲಿ ಪತ್ರಿಕಾಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಜೊತೆಯಲ್ಲಿ ಪತ್ರಕರ್ತರ ಒಗ್ಗಟ್ಟು ಬಹುಮುಖ್ಯವಾಗಲಿದೆ ಎಂದರು.
ಸಂಘದ ಸ್ಥಾಪಕ ಅಧ್ಯಕ್ಷ ಡಿ.ವಿ ಗುಂಡಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಈಗ ದೃಶ್ಯ ಮಾಧ್ಯಮದೊಂದಿಗೆ ಮುದ್ರಣ ಮಾಧ್ಯಮ ಪೈಪೋಟಿ ನಡೆಸಬೇಕಿದೆ. ಇದರಿಂದಾಗಿ ಮುದ್ರಣ ಮಾಧ್ಯಮ ತೊಂದರೆ ಅನುಭವಿಸುವಂತಾಗಿದೆ. ಕಾರ್ಯಕ್ರಮದ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಪತ್ರಿಕೆಗಳಿಂದ ಮಾತ್ರ ಸಿಗಲಿದೆ. ರಾಜ್ಯ ದಿನಪತ್ರಿಕೆಗಳ ಮುಂದೆ ವಾರಪತ್ರಿಕೆಗಳು ನಡೆಯುವುದು ಕಷ್ಟಕರವಾಗಲಿದೆ. ತಪ್ಪು ಮಾಡುವ ರಾಜಕಾರಣಿಗಳನ್ನು ಅಧಿಕಾರಿಗಳನ್ನು ತಿದ್ದುವ ಕಾರ್ಯವನ್ನು ಮಾಧ್ಯಮ ಮಾಡಬೇಕಿದೆ. ಆಶ್ರಯ ಯೋಜನೆಗೆ ಜಮೀನು ಖರೀದಿ ಮಾಡಲು ಕಷ್ಟಕರವಾಗಲಿದೆ. ಅಭಿವೃದ್ದಿ ವಿಷಯಗಳಿಗೆ ಮಾಧ್ಯಮದವರ ಸಲಹೆ ಅವಶ್ಯಕವಾಗಲಿದೆ ಎಂದರು.
ಕೆಯುಡ್ಲೂಜೆ ಜಿಲ್ಲಾಧ್ಯಕ್ಷ ಟಿ.ಎನ್.ಎ. ಮೊದಲಿಯಾರ್ ಮಾತನಾಡಿ, ಪತ್ರಕರ್ತರ ಸಂಘ ಆಚರಣೆಗೆ ಮಾತ್ರ ಸೀಮಿತವಾಗದೆ ಸುದ್ದಿಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ತಂತ್ರಜ್ಞಾನ ಮುಂದುವರೆದು ಈಗೀನ ಸುದ್ದಿಗಳು ಇಡೀ ಪ್ರಪಂಚಕ್ಕೆ ತಲುಪಲಿದೆ. ದೃಶ್ಯ ಮಾಧ್ಯಮಕ್ಕೆ ಮಾರುಹೋಗುತ್ತಿದ್ದೇವೆ, ಮುದ್ರಣ ಮಾಧ್ಯಮ ಹಾಗೂ ದೃಶ್ಯಮಾಧ್ಯಮ ಖಾಸಗಿ ಕಂಪನಿಗಳ ಒಡೆತನದಲ್ಲಿದ್ದು, ನಿಖರವಾದ ಸುದ್ದಿ ಜನರಿಗೆ ತಲುಪುತ್ತಿಲ್ಲ. ಪತ್ರಕರ್ತರು ಸ್ವಾಭಿಮಾನಿಗಳಾಗಿ ಬದುಕಬೇಕಿದೆ. ಬೇಡುವ ಮನೋಭಾವದಿಂದ ಹೊರಬರಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಯುಡ್ಲೂಜೆ ತಾಲ್ಲೂಕು ಅಧ್ಯಕ್ಷ ಬೀರೂರು ಎನ್.ಗಿರೀಶ್ ಮಾತನಾಡಿ, ಸರ್ಕಾರ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಪರಿಗಣಿಸುತ್ತಿರುವ ರೀತಿ ಗ್ರಾಮೀಣ ಪತ್ರಕರ್ತರ ಬಗ್ಗೆಯೂ ಪರಿಗಣಿಸುವಂತಾಗಬೇಕಿದೆ. ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸುಸಜ್ಜಿತವಾದ ಒಂದು ಪತ್ರಿಕಾ ಭವನ ನಿರ್ಮಿಸಿಕೊಡಲು ಕ್ಷೇತ್ರದ ಶಾಸಕರು ಭರವಸೆ ನೀಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸರ್ಕಾರ ನೀಡುವ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಯತ್ನ ನಡೆಸಲಾಗುವುದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಸೇರಿದಂತೆ ಪತ್ರಿಕಾ ವಿತರಕರು ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಜಿ. ಕೃಷ್ಣಮೂರ್ತಿ, ತಾಪಂ ಇಒ ಸಿ.ಆರ್.ಪ್ರವೀಣ್, ಶೂದ್ರಶ್ರೀನಿವಾಸ್, ಬಿ.ಆರ್.ಮೋಹನ್‍ಕುಮಾರ್, ಮಧುಬಾವಿಮನೆ, ಅರೇಹಳ್ಳಿ ಮಲ್ಲಿಕಾರ್ಜುನ್, ಡಾ. ಕೆಂಚೇಗೌಡ, ಕೆ.ಆರ್.ಸುರೇಶ್, ಎಚ್.ಎಸ್.ಪರಮೇಶ್, ಸಿ.ಕೆ.ಮೂರ್ತಿ, ಹಿರೇನಲ್ಲೂರು ಶಿವು, ಕೆ.ಜಿ.ಲೋಕೇಶ್ವರ್, ಎಸ್.ಸುಬ್ರಹ್ಮಣ್ಯ, ಟಿ.ಆರ್. ಭೈರೇಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಎಚ್.ಆರ್.ದೇವರಾಜ್, ಬಿ.ಆರ್.ನಾಗರಾಜ್, ನಾಗೇಂದ್ರಪ್ರಸಾದ್ ಮತ್ತಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!