May 17, 2024

MALNAD TV

HEART OF COFFEE CITY

ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಹೊಲದಗದ್ದೆ ಗಿರೀಶ್

1 min read
Girish Holadagadde

Girish Holadagadde

ಜಾತ್ಯಾತೀತ ಜನತಾದಳ ಪಕ್ಷದ ಪ್ರಾರ್ಥಮಿಕ ಸದಸ್ಯತ್ವ ಸ್ಥಾನ ಸೇರಿದಂತೆ ಜೆಡಿಎಸ್ ಪಕ್ಷದ ಜಿಲ್ಲಾ ಮಾಧ್ಯಮ ವಕ್ತಾರರ ಸ್ಥಾನಕ್ಕೂ ರಾಜಿನಾಮೆ ನೀಡುವ ಮೂಲಕ ಜೆಡಿಎಸ್ ಪಕ್ಷಕ್ಕೆ ಹೊಲದಗದ್ದೆ ಗಿರೀಶ್ ಗುಡ್ ಬೈ ಹೇಳಿದ್ದಾರೆ.

ಜಾತ್ಯಾತೀತ ಜನತಾದಳ ಪಕ್ಷದ ಜಿಲ್ಲಾ ಮಾಧ್ಯಮ ವಕ್ತಾರರಾಗಿ ಹಲವು ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ನಿಷ್ಠಾವಂತ ಕಾರ್ಯಕರ್ತರಾಗಿ ಗಿರೀಶ್  ದುಡಿದಿದ್ದರು. ರಾಜಿನಾಮೆ ನೀಡಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು

ಜಾತ್ಯತೀತ ಜನತಾದಳದ ಸ್ಥಳೀಯ ಹಾಗೂ ರಾಜ್ಯ ನಾಯಕರುಗಳ ಇತ್ತೀಚಿನ ತೀರ್ಮಾನಗಳು ಪ್ರಾಮಾಣಿಕ ಕಾರ್ಯಕರ್ತರನ್ನು ತೀವ್ರವಾಗಿ ಮುಜುಗುರಕ್ಕೀಡು ಮಾಡಿರುವುದರಿಂದ ಬೇಸತ್ತು ಪಕ್ಷದ ಜಿಲ್ಲಾ ವಕ್ತಾರ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ.

ಪ್ರಮುಖವಾಗಿ ಈ ಬಾರಿ ವಿಧಾನಸಭೆ ಚುನಾವಣೆ ಬಿ ಫಾರಂ ಹಂಚಿಕೆ ಸಂದರ್ಭದಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲೂ ಸ್ಪಷ್ಟ ತೀರ್ಮಾನಗಳಿಲ್ಲದೆ, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರನ್ನು ಗೊಂದಲದಲ್ಲಿ ಸಿಕ್ಕಿಸಿಸಲಾಯಿತು. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ದಕ್ಷತೆಗೆ ಹೆಸರಾಗಿದ್ದ, ಯಾವುದೇ ಕಳಂಕವಿಲ್ಲದೆ ಶಾಸಕ, ಸಚಿವ ಸ್ಥಾನವನ್ನು ನಿಭಾಯಿಸಿ, ಸಜ್ಜನ ರಾಜಕಾರಣಿ ಎನಿಸಿದ್ದ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ನೀಡದೇ, ಅನ್ಯಾಯ ಮಾಡಿದ್ದು, ಒಂದು ವರ್ಷದ ಹಿಂದೆಯೇ ಎಂ.ಪಿ.ಕುಮಾರಸ್ವಾಮಿ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್‌, ಬೋಜೇಗೌಡ, ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್ ಆಹ್ವಾನಿಸಿದ್ದರು ಎಂದು ಸ್ವತಃ ಎಂ.ಪಿ.ಕುಮಾರಸ್ವಾಮಿ ಅವರೇ ಹೋದಲೆಲ್ಲಾ ಭಾಷಣ ಮಾಡುತ್ತಿದ್ದಾರೆ. ವಿಶೇಷವೆಂದರೆ ಎಂ.ಪಿ.ಕುಮಾರಸ್ವಾಮಿ ಅವರು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಸಂಬಂಧಪಟ್ಟ ಯಾವುದೇ ವೀಡಿಯೋ, ಪೋಟೋಗಳನ್ನು ವೈರಲ್ ಮಾಡಬಾರದು ಎಂದು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಇಂತಹವರಿಗೆ ಟಿಕೇಟ್ ನೀಡಿರುವುದು ಜೆಡಿಎಸ್‌ಗೆ ಇಂತಹ ದುಸ್ಥಿತಿ ಬರಬಾರದಿತ್ತು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿ.ಎಂ.ತಿಮ್ಮಶೆಟ್ಟಿ ಅವರನ್ನು ನೀವೇ ಅಭ್ಯರ್ಥಿ ಎಂದು ಚುನಾವಣೆ ಸಿದ್ಧತೆಗೆ ಕೋಟ್ಯಾಂತರ ರೂ. ಖರ್ಚು ಮಾಡಿಸಿ ನಂತರ ಕಡೇ ಗಳಿಗೆವರೆಗೆ ಸತಾಯಿಸಿ, ಅಪಮಾನಿಸಿ, ಅಂತಿಮವಾಗಿ ಕಾಂಗ್ರೆಸ್‌ನಿಂದ ಯಾರೂ ವಲಸೆ ಬರಲು ಒಪ್ಪದ ಕಾರಣಕ್ಕೆ ಅವರನ್ನೇ ಅಭ್ಯರ್ಥಿಯಾಗಿ ಉಳಿಸಿಕೊಳ್ಳಲಾಯಿತು. ನಂತರ ಪಕ್ಷದ ವತಿಯಿಂದ ಅವರಿಗೆ ಯಾವುದೇ ರೀತಿಯ ಸಹಕಾರವನ್ನೂ ಮಾಡದೆ, ಅವರ ವಿರುದ್ಧವೇ ಪ್ರಚಾರ ಮಾಡುತ್ತ, ಕಾಂಗ್ರೆಸ್‌ಗೆ ಮತಹಾಕಿ ಎಂದು ಬಹಿರಂಗವಾಗಿ ಕರೆ ನೀಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಕಡೂರು ಕ್ಷೇತ್ರದಲ್ಲಿ ವೈಎಸ್‌ ದತ್ತ ಅವರಿಗೆ ಟಿಕೆಟ್ ನೀಡಿರುವುದು ಸ್ವಾಗತಾರ್ಹವಾದರೂ ಅವರನ್ನು ಚುನಾವಣೆ ಘೋಷಣೆಗೆ ಮುನ್ನವೇ ಮನವೊಲಿಸಿ ಪಕ್ಷಕ್ಕೆ ವಾಪಾಸ್‌ ಕರೆತಂದಿದ್ದರೆ ಇನ್ನಷ್ಟು ಅನುಕೂಲವಾಗುತ್ತಿತ್ತು. ಅದನ್ನು ಬಿಟ್ಟು ಅಲ್ಲೂ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಟಿಕೆಟ್‌ ಆಮಿಷವೊಡ್ಡಿ ಅವರಿಂದಲೂ ಕ್ಷೇತ್ರದಲ್ಲಿ ಪ್ರಚಾರ ಮಾಡಿಸಿ ಲಕ್ಷಾಂತರ ರೂ. ಖರ್ಚು ಮಾಡಿಸಿ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಲಾಯಿತು. ದತ್ತಣ್ಣ ಅವರನ್ನು ಮತ್ತೆ ಕರೆತಂದಿರುವುದರಲ್ಲಿ ನಾಯಕರುಗಳ ಸ್ವಾರ್ಥ ಮಾತ್ರ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ತರೀಕೆರೆ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುವ ವಿಚಾರದಲ್ಲಿ ಯಾವೊಬ್ಬ ನಾಯಕರೂ ಕೊನೆ ವರೆಗೆ ಗಂಭೀರವಾಗಿ ಪ್ರಯತ್ನವನ್ನೇ ಮಾಡಲಿಲ್ಲ. ತರೀಕೆರೆ ಕ್ಷೇತ್ರ ಜೆಡಿಎಸ್‌ ಪಟ್ಟಿಯಲ್ಲೇ ಇಲ್ಲ ಎನ್ನುವಂತೆ ವರ್ತಿಸಲಾಯಿತು. ಅಲ್ಲಿ ಪ್ರಮಾಣಿಕ ಕಾರ್ಯತ್ರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೂ ಎಲ್ಲರನ್ನೂ ನಿರ್ಲಕ್ಷ್ಯ ಮಾಡಲಾಯಿತು. ಕನಿಷ್ಟ ಜಿಲ್ಲಾ ಪದಾಧಿಕಾರಿಗಳು, ಸ್ಥಳೀಯ ಮುಖಂಡರ ಜೊತೆಗೂ ಈ ವಿಚಾರದಲ್ಲಿ ಚರ್ಚಿಸುವ ಸೌಜನ್ಯ ತೋರಲಿಲ್ಲ. ಸ್ವಂತ ಬಲದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಹೊರಟ ಪಕ್ಷಕ್ಕೆ ತರೀಕೆರೆಯಂತಹ ಕ್ಷೇತ್ರಕ್ಕೆ ಅಭ್ಯರ್ಥಿಯನ್ನೇ ಹಾಕಲಾಗಲಿಲ್ಲ ಎನ್ನುವುದು ನಾಚಿಕೆಯ ವಿಷಯ. ಇನ್ನು ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ಸುಧಾಕರ ಶೆಟ್ಟಿ ಅವರು ಗೆಲುವು ತಂದುಕೊಡುವ ಭರವಸೆ ಮೂಡಿಸಿದ್ದರೂ, ಯಾವ ನಾಯಕರೂ ಅವರನ್ನು ನೈತಿಕವಾಗಿ ಬೆಂಬಲಿಸುವ ಕೆಲಸವನ್ನೇ ಮಾಡಲಿಲ್ಲ. ಯಾರೊಬ್ಬರೂ ಪ್ರಚಾರದಲ್ಲಿ ಭಾಗವಹಿಸಿಲ್ಲ. ಅವರ ಸಾಮರ್ಥ್ಯದಲ್ಲೇ ಗೆದ್ದುಬರಲಿ ಎನ್ನುವ ಧೋರಣೆ ಅನುಸರಿಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಕೆಲವೇ ಮಂದಿಯ ಸ್ವಾರ್ಥ ರಾಜಕಾರಣ, ಸರ್ವಾಧಿಕಾರಿ ಧೋರಣೆಯಿಂದಾಗಿ ರೈತರು, ಬಡವರು, ದೀನ, ದಲಿತರ ಪಕ್ಷ ಎಂದೇ ಹೆಸರಾಗಿದ್ದ ಜೆಡಿಎಸ್ ಅಧೋಗತಿ ಹೊಂದುತ್ತಿರುವುದು ನೋವಿನ ಸಂಗತಿ. ಪಕ್ಷದ ಜಿಲ್ಲಾ ವಕ್ತಾರನಾಗಿ ಸಾಮಾನ್ಯ ಕಾರ್ಯತ್ರರು, ಮಾಧ್ಯಮ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಹ ಸಾದ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಕಾರಣದಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ವಕ್ತಾರನಾಗಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಪಕ್ಷ ಕಷ್ಟದ ಸ್ಥಿತಿಯಲ್ಲಿದ್ದಾಗಲೂ ಬಾವುಟ, ಬ್ಯಾನರ್‌ಗಳನ್ನು ಕಟ್ಟಿ, ಮೈಕ್ ಹಿಡಿದು ಪ್ರಚಾರ ಮಾಡಿ ಸಂಘಟನೆಗಾಗಿ ಶ್ರಮಿಸಿದ್ದೇನೆ. ನನ್ನಂತ ಸಹಸ್ರಾರು ಕಾರ್ಯಕರ್ತರು ಜಿಲ್ಲೆಯಲ್ಲಿದ್ದು ಅವರೆಲ್ಲರೂ ನಾಯಕರುಗಳ ಧೋರಣೆಯಿಂದ ಬೇಸತ್ತಿದ್ದಾರೆ. ಇಷ್ಟು ದಿನ ನನ್ನೊಂದಿಗೆ ಸಹಕರಿಸಿದ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು, ಮಾಧ್ಯಮ ಪ್ರತಿನಿಧಿಗಳಿಗೆ ಅಭಾರಿಯಾಗಿದ್ದೇನೆ. ಸಧ್ಯದಲ್ಲೇ ನನ್ನ ಮುಂದಿನ ರಾಜಕೀಯ ತೀರ್ಮಾನವನ್ನು ನಿರ್ಧರಿಸಲಿದ್ದೇನೆ ಎಂದು ಹೇಳಿದರು

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!