May 13, 2024

MALNAD TV

HEART OF COFFEE CITY

ಮಲೆನಾಡಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ, ಬೀದಿಗೆ ಬಿದ್ದ ಕಾಫಿ, ಅಡಿಕೆ ಬೆಳೆಗಾರರು, ರೈತರ ಪರಿಸ್ಥಿತಿ ಶೋಚನೀಯ..

1 min read

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಮಲೆನಾಡಿಗರು ಬಳಲಿ ಬೆಂಡಾಗಿದ್ದಾರೆ. ಅಡಿಕೆ-ಕಾಫಿ ಕುಯ್ಯೋಕೆ ಆಗದೆ, ಕುಯ್ದ್ರು ಒಣಗಿಸೋಕೆ ಜಾಗವಿಲ್ಲದೆ ಒಂದು ರೀತಿಯಲ್ಲಿ ಅಕ್ಷರಶಃ ನೊಂದು ಹೋಗಿದ್ದಾರೆ. ಕೊಯ್ದಿದ್ರೆ ವರ್ಷದ ಬದುಕು ತೋಟದಲ್ಲೇ ಮಣ್ಣು ಪಾಲಾಗಿದೆ ಎಂದು ಕಣ್ಣೀರಿಡುವಂತಾಹ ಪರಿಸ್ಥಿತಿ ಮಲೆನಾಡಿಗರದ್ದು. ಪ್ರಕೃತಿ ಎದುರು ನರಮನ್ಷ ತೃಣಕ್ಕೆ ಸಮ ಎಂಬಂತೆ ಏನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕೊಯ್ದಿರೋ ಕಾಫಿ-ಅಡಿಕೆ ಮೇಲೆ ಈಗಾಗಲೇ ಹೂ ಬೆಳೆಯುತ್ತಿದೆ. ಸದ್ಯಕ್ಕೆ ತಲೆಮೇಲೆ ಕೈಹೊದ್ದು ಕೂರುವುದೊಂದೆ ಮಲೆನಾಡಿಗರಿಗೆ ಉಳಿದಿರೋದು. ಇನ್ನು ಅಡಿಕೆ ತೋಟದಲ್ಲಿ ನೀರು ನುಗ್ಗಿ ಅಡಿಕೆ ಬೆಳೆಗಾರರ ಪರಿಸ್ಥಿತಿ ಮೂರಾಬಟ್ಟೆಯಾಗಿದೆ. ಇನ್ನೂ ಕಡೂರು-ಅಜ್ಜಂಪುರ ಭಾಗದಲ್ಲಿ ಈರುಳ್ಳಿ ಪರಿಸ್ಥಿತಿಯನ್ನ ಕೇಳೋದೆ ಬೇಡವಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಮೂರು ಹಾವಾಗುಣ ಹೊಂದಿರೋ ಚಿಕ್ಕಮಗಳೂರಲ್ಲಿ ಮಳೆ ರೌದ್ರನರ್ತನಕ್ಕೆ ಬದುಕು ಬರ್ಬಾದ್ ಆಗಿದೆ. ಜಿಲ್ಲೆಯಲ್ಲಿ ಯತೇಚ್ಛವಾಗಿ ಅಡಿಕೆ-ಕಾಫಿ-ಮೆಣಸು ಇದೆ. ಈ ಮೂರು ಪ್ರಮುಖ ವಾಣಿಜ್ಯ ಬೆಳೆಗಳ ಮೇಲೆ ಲಕ್ಷಾಂತರ ಕೂಲಿ ಕುಟುಂಬಗಳು ಅವಲಂಬಿತವಾಗಿವೆ. ಮಳೆಯಿಂದ ಬಹುತೇಕ ಬೆಳೆ ಮಣ್ಣುಪಾಲಾಗಿದೆ. ಶ್ರೀಮಂತ ಬೆಳೆಗಾರರೇನೋ ಹೇಗೋ ಬದುಕ್ತಾರೆ. ಆದ್ರೆ, ನಾಲ್ಕೈದು ಎಕರೆಯ ಸಣ್ಣ ಬೆಳೆಗಾರರು ಹಾಗೂ ಕೂಲಿಕಾರ್ಮಿಕರ ಕುಟುಂಬಗಳು ಮಾತ್ರ ಕೂಲಿ ಇಲ್ಲದೆ ಬೀದಿಗೆ ಬಂದು ನಿಲ್ಲೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಮಳೆ ನಿಲ್ಲಲ್ಲಿ ಎಂದು ಮಲೆನಾಡಿಗರು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ…

ಬೆಳೆ ಉಳಿಸಿಕೊಳ್ಳಲು ರೈತರ ಹೋರಾಟ

ವಾಯುಭಾರ ಕುಸಿತದ ಕಾರಣ ಹವಾಮಾನ ವೈಪರಿತ್ಯದಿಂದಾಗಿ ರೈತರು ಅಡಿಕೆಯನ್ನ ಒಣಗಿಸಲು ಆಗದೆ ಮಲೆನಾಡಿಗರು ಮಲಗುವ ಮಂಚದ ಮೇಲೆ ಅಡಿಕೆ ಹಾಕಿ, ಕೆಳಗೆ ಬೆಂಕಿ ಹಾಕಿ ಅಡಿಕೆಯನ್ನ ಒಣಗಿಸುವಂತಹಾ ದುಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ವೃದ್ಧ ಗಜೇಂದ್ರ ಹೆಬ್ಬಾರ್ ಪ್ರಕೃತಿ ಎದುರು ಅಸಹಾಯಕರಾಗಿ ಮನೆಯಲ್ಲಿ ಮಲಗುವ ಮಂಚದ ಮೇಲೆ ಅಡಿಕೆ ಒಣಗಿಸುತ್ತಿದ್ದಾರೆ. ಮಲೆನಾಡಲ್ಲಿ ಕಳೆದ ಒಂದೆರಡು ತಿಂಗಳಿಂದಲೂ ಒಂದೆರಡು ದಿನ ಬಿಡುವ ನೀಡುವ ವರುಣದೇವ ಮತ್ತೆ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಹೊತ್ತಲ್ಲದ ಹೊತ್ತಲ್ಲಿ ಮಳೆ-ಬಿಸಿಲು-ಮೋಡದ ವಾತಾವರಣ ನಿರ್ಮಾಣವಾಗುತ್ತಿದೆ. ಹಾಗಾಗಿ, ಮಲೆನಾಡಿಗರು ಕೊಯ್ದಿರೋ ಕಾಫಿಯನ್ನ ಒಣಗಿಸಲು ಜಾಗವಿಲ್ಲದೆ ಪರದಾಡುವಂತಾಗಿದೆ. ಅಡಿಕೆ-ಕಾಫಿ ಮಲೆನಾಡಿಗರ ಜೀವ. ಸಣ್ಣ-ಸಣ್ಣ ಹಿಡುವಳಿ ಮೂಲಕ ಬದುಕು ಕಟ್ಟಿಕೊಂಡಿವರೇ ಹೆಚ್ಚು. ಆದರೆ, ಈಗ ಹವಾಮಾನದ ವೈಪರಿತ್ಯದಿಂದ ಮಲೆನಾಡಿಗರು ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಪ್ರಕೃತಿ ವಿರುದ್ಧ ಹೋರಾಡಲು ಶಕ್ತಿ ಇಲ್ಲದ ಮನುಷ್ಯರು ಸಿಕ್ಕ-ಸಿಕ್ಕ ದಾರಿಯಲ್ಲಿ ಬೆಳೆಗಳನ್ನ ಉಳಿಸಿಕೊಂಡು ವರ್ಷದ ಬದುಕು ದೂಡಲು ಮುಂದಾಗಿದ್ದಾರೆ. ಈಗಾಗಲೇ ಮಲೆನಾಡಿನಾದ್ಯಂತ ವರುಣ ಅಬ್ಬರಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿದೆ. ಮಲೆನಾಡಲ್ಲಿ ಜನವರಿಯಿಂದಲೂ ನಿರಂತರ ಮಳೆಯಾಗಿದೆ. ಬೆಳೆ ಗಿಡದಲ್ಲಿ ಇರುವುದಕ್ಕಿಂತ ಮಣ್ಣು ಪಾಲಾಗಿದ್ದೆ ಹೆಚ್ಚು. ಮಳೆ ವಿರುದ್ಧ ತೊಡೆತಟ್ಟಿ ನಿಂತು ಬದುಕುಳಿದಿದ್ದ ಬೆಳೆಗೆ ಈಗ ಸೂರ್ಯದೇವನೂ ಮಗ್ಗಲ ಮುಳ್ಳಾಗಿದ್ದಾನೆ. ವಾಯಭಾರ ಕುಸಿತದಿಂದ ಮಲೆನಾಡಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಜನ ಬಿಸಿಲು ನೋಡದೆ ವಾರವೇ ಕಳೆದಿದೆ. ಬರೀ ಮೋಡ. ತಣ್ಣನೆಯ ಗಾಳಿ. ಇದರಿಂದ ಸಣ್ಣ-ಸಣ್ಣ ಕಾಫಿ ಹಾಗೂ ಅಡಿಕೆ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಹೈರಾಣಾಗಿದ್ದಾರೆ.

 

ಬೇರೆ ದಾರಿ ಇಲ್ಲದೆ ಶತಮಾನಗಳಲ್ಲೇ ಮಾಡದ ಹೋರಾಟದ ಮೂಲಕ ಬೆಳೆಯನ್ನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಳೆದ ಒಂದೆರಡು ತಿಂಗಳ ನಿರಂತರ ಮಳೆಯಿಂದ ಮಲೆನಾಡಿಗರು ಸುರಿಯೋ ಮಳೆಯಲ್ಲಿ ಕಾಫಿಯನ್ನ ಕಟಾವು ಮಾಡಿದ್ದರು. ನೆಲದಲ್ಲಿ ಬಿದ್ದ ಕಾಫಿ-ಅಡಿಕೆಯನ್ನ ಆಯ್ದು ಮನೆಗೆ ತಂದಿದ್ದರು. ಇಂದು ಆ ಕಾಫಿ-ಅಡಿಕೆಯನ್ನ ಒಣಗಿಸಲು ಜಾಗವಿಲ್ಲದೆ ಬೆಂಕಿ ಹಾಕಿ ಒಣಗಿಸುತ್ತಿದ್ದಾರೆ. ಈ ರೀತಿ ಒಣಗಿಸದಿದ್ದರೆ ಬೆಳೆ ಮೇಲೆ ಹೂ ಬೆಳೆದು ಬೆಳೆ ಸಂಪೂರ್ಣ ನಾಶವಾಗಲಿದೆ. ಕಳೆದ ಎರಡ್ಮೂರು ವರ್ಷಗಳಿಂದ ಬಹುತೇಕ ಬೆಳೆಯನ್ನ ಕಳೆದುಕೊಂಡಿದ್ದ ಮಲೆನಾಡಿಗರು ಈ ವರ್ಷ ಮಳೆ ಪ್ರಮಾಣ ತುಸು ಕಡಿಮೆ ಇದ್ದರೂ ಬೆಳೆಯನ್ನ ಕಳೆದುಕೊಂಡು ಬದುಕಿನ ಬಗ್ಗೆ ಅತಂತ್ರರಾಗಿದ್ದಾರೆ. ಕಟಾವು ಮಾಡಿದ ಬೆಳೆ ಶೀಥಕ್ಕೆ ಇಟ್ಟ ಜಾಗದಲ್ಲೇ ಕೊಳೆಯುತ್ತದೆ. ಈ ಬಾರಿ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ಬದುಕು ಅತಂತ್ರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ-ಅಡಿಕೆ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಬೆಳೆಗಾರರು ಮತ್ತಷ್ಟು ಶೋಚನಿಯ ಸ್ಥಿತಿ ತಲುಪಲಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಾರೆ, ಕಳೆದ 11 ತಿಂಗಳಿಂದ ನಿರಂತರ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿರೋ ಮಲೆನಾಡಿಗರು ಬೆಳೆ ಉಳಿಸಿಕೊಳ್ಳಲು ಪ್ರಕೃತಿ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಮಳೆ ನಿಂತ ಕೂಡಲೇ ಕಾಫಿ-ಅಡಿಕೆ ಒಣಹಾಕೋದು, ಮೋಡವಾದ ಕೂಡಲೇ ಮುಚ್ಚಿಡೋದು. ಕೆಲವರು ವಾಸದ ಮನೆಯಲ್ಲಿ ಪೂರ್ತಿ ಕಾಫಿ ಹರಿಡಿದ್ರೆ. ಮತ್ತಲವರು ಒಲೆ ಮೇಲೆ ಕಾಫಿಯನ್ನ ಒಣಗಿಸುತ್ತಿದ್ದಾರೆ. ಆದ್ರೆ, ಕೊಳೆತು, ಬೆಳೆ ಮೇಲೆ ಹೂ ಬೆಳೆದಿರೋ ಕಾಫಿ-ಅಡಿಕೆಯೇ ಹೆಚ್ಚು. ಕಾಫಿ-ಅಡಿಕೆಯ ನಷ್ಟದಿಂದ ನಿಜಕ್ಕೂ ಕಂಗಾಲಾಗಿರೋದು ಕೂಲಿ ಕಾರ್ಮಿಕರ ಕುಟುಂಬಗಳು. ಮಳೆರಾಯ ಬೆಳೆಗಾರರ ಪರ ಬೇಡ. ಕೂಲಿ ಕಾರ್ಮಿಕರ ಪರವಾದ್ರೂ ಇರಲಿ ಅನ್ನೋದು ನಮ್ಮ ಆಶಯ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!