May 5, 2024

MALNAD TV

HEART OF COFFEE CITY

ಗ್ರಾಮಮಟ್ಟದಲ್ಲಿ ಜಲಜೀವನ್ ಮಿಷನ್ ಅನುಷ್ಠಾನ: ಗ್ರಾ.ಪಂ ಸದಸ್ಯರುಗಳಿಗೆ ತರಬೇತಿ

1 min read

ಚಿಕ್ಕಮಗಳೂರು-ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಯೋಜನೆಯನ್ನು ಗ್ರಾಮಪಂಚಾಯಿತಿ ಮಟ್ಟದ ಹಳ್ಳಿಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಂಬಂಧ ಸೊಸೈಟಿ ಫಾರ್ ಪೀಪಲ್ಸ್ ಇಂಟಿಗ್ರೇಟೆಡ್ ಡೆವಲಪ್‍ಮೆಂಟ್ಸ್ ಸಹಯೋಗದಲ್ಲಿ ಗ್ರಾಮಪಂಚಾಯಿತಿ ಸದಸ್ಯರು, ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ನಗರದ ಖಾಸಗಿ ಹೋಟೆಲ್‍ವೊಂದರಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಈ ಹಿಂದೆ ಸ್ಥಳೀಯ ಜಲ ಸಂಪನ್ಮೂಲಗಳನ್ನು ಬಳಸಿ ಮನೆಗಳಿಗೆ ನೀರು ಪೂರೈಸಲಾಗುತ್ತಿತ್ತು. ಇದೀಗ ಜಲಮೂಲಗಳ ಆಶ್ರಯಿಸಿ ಪ್ರತಿ ಹಳ್ಳಿಗಳ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ನೀರು ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಇದನ್ನು ಗ್ರಾಮಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ರಾಮಪಂಚಾಯಿತಿ ಸದಸ್ಯರು, ಅಧ್ಯಕ್ಷರ ಸಹಕಾರ ಅಗತ್ಯ ಎಂದು ತಿಳಿಸಿದರು.
ಗ್ರಾಮಗಳಿಗೆ ಸ್ಥಿರವಾದ ಜಲಮೂಲದಿಂದ ನೀರು ಸಂಸ್ಕರಣೆ ಮಾಡಿ ಮನೆಗಳಿಗೆ ಶಾಶ್ವತವಾದ ನೀರು ಪೂರೈಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ಘಟ್ಟ ಪ್ರದೇಶಗಳಲ್ಲಿ ಕಾಮಗಾರಿ ಆರಂಭಗೊಂಡಿದ್ದು 2ನೇ ಹಂತದಲ್ಲಿ ಬಯಲು ಸೀಮೆ ಪ್ರದೇಶಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಭದ್ರಾ ಜಲಾಶಯದಿಂದ ತರೀಕೆರೆ, ಕಡೂರು, ಚಿಕ್ಕಮಗಳೂರಿನ ಬಯಲು ಸೀಮೆ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸರ್ಕಾರ ಮಂಜೂರಾತಿ ದೊರಕಿಸಿ ಅನುದಾನ ನೀಡಿದ್ದು ಸದ್ಯದಲ್ಲೇ ಮೊದಲ ಹಂತದ ಕಾಮಗಾರಿ ಚಾಲನೆ ದೊರೆಯಲಿದೆ ಎಂದರು.

ಜಿಲ್ಲೆಯಲ್ಲಿ 1037 ಹಳ್ಳಿಗಳಿದ್ದು, 3700 ಜನವಸತಿ ಪ್ರದೇಶಗಳಿವೆ, 2.27 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸಬೇಕಿದೆ. ಇದಕ್ಕಾಗಿ ಪ್ರತಿ ಗ್ರಾಮಪಂಚಾಯಿತಿಗಳಲ್ಲಿನ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿರುವ ನೀರಿನ ಲಭ್ಯತೆ, ಜಲಮೂಲಗಳು, ಕುಟುಂಬಗಳ ಸಂಖ್ಯೆಯ ನಿಖರ ಮಾಹಿತಿಯನ್ನು ಸಂಗ್ರಹಣೆ ಮಾಡಿಟ್ಟುಕೊಳ್ಳುವಂತೆ ಸಲಹೆ ನೀಡಿದರು. ಯೋಜನೆ 2 ಹಂತಗಳಲ್ಲಿ ಕಾಮಗಾರಿಯಾಗಲಿದ್ದು ಮೊದಲ ಹಂತದಲ್ಲಿ ಜಲಮೂಲದಿಂದ ಗ್ರಾಮಗಳಿಗೆ ನೀರು ತರುವುದು, ಬಳಿಕ ಮನೆ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಮನೆ ಮನೆಗೆ ನೀರು ಪೂರೈಸುವುದಾಗಿದೆ ಎಂದು ಮಾಹಿತಿ ನೀಡಿದರು.

ಜಲಜೀವನ್ ಮಿಷನ್ ಯೋಜನೆಯಲ್ಲಿ ನೀರು ಪೂರೈಕೆ ಮಾಡಲು ಪ್ಲಾಸ್ಟಿಕ್ ಪೈಪ್ ಬದಲಾಗಿ ಹೆಚ್‍ಡಿಪಿ ಪೈಪ್ ಅಳವಡಿಸಿ, ಮೀಟರ್ ಅಳವಡಿಸಲಾಗುವುದು. ಈ ಬಗ್ಗೆ ಹಣ ವಸೂಲಿ ಮಾಡಲು ಮೀಟರ್ ಅಳವಡಿಸಲಾಗುತ್ತಿದೆ ಎಂಬ ಗೊಂದಲಗಳಿದ್ದು ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಮನವರಿಕೆ ಮಾಡಬೇಕು ಎಂದರು.
ಜಿಲ್ಲೆಯ ಕಡೂರು, ಚಿಕ್ಕಮಗಳೂರು ತಾಲ್ಲೂಕಿನ ಸೇರಿದಂತೆ 6 ಗ್ರಾಮಪಂಚಾಯಿತಿ ಒಟ್ಟು 60 ಸದಸ್ಯರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಎಲ್ಲರು ಜೆಜೆಎಂ ಅನುಷ್ಟಾನ ತರಬೇತಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ವಿನಾಯಕ್ ಜೆ. ಹುಲ್ಲೂರು ಮಾತನಾಡಿ 70-80 ರ ದಶಕದಲ್ಲಿ ಬರಗಾಲ ಆವರಿಸಿ ನೀರಿಗೆ ಹಾಹಾಕಾರ ಉಂಟಾಗಿದ್ದು ಆ ಸಂದರ್ಭದಲ್ಲಿ ಕೊಳವೆ ಬಾವಿ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿತ್ತು, ಇದೀಗ ಜಲಮೂಲಗಳನ್ನು ಆಶ್ರಯಿಸಿ ಶಾಶ್ವತವಾಗಿ ಮನೆ ಮನೆಗೆ ನೀರು ಪೂರೈಸಲು ಜೆಜೆಎಂ ಯೋಜನೆ ಜಾರಿಗೊಳಿಸಲಾಗಿದೆ ಇದನ್ನು ಹಳ್ಳಿಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಪಂಚಾಯಿತಿಗಳ ಜನಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಿದ್ದು ಜನರಿಗೆ ಪ್ರಚಾರ ಪಡಿಸುವುದರ ಜತೆಗೆ ತಿಳುವಳಿಕೆ ಮೂಡಿಸಬೇಕು ಎಂದು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!