May 15, 2024

MALNAD TV

HEART OF COFFEE CITY

ಯಾರು ಹಿರಿಯರು?

1 min read

 

ನಾನು ಹಿರಿಯ, ತಾನು ಹಿರಿಯರೆಂಬವರೆಲ್ಲ ಹಿರಿಯರೇ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದೊಳಗಿಪ್ಪವರೆಲ್ಲಾ ಹಿರಿಯರೇ?
ಆಟಮಟ ಕುಟಿಲ ಕುಹಕ ಪಿಸುಣತನದಲ್ಲಿಪ್ಪವರೆಲ್ಲಾ ಹಿರಿಯರೇ?
ಸರ್ಪ ಸಾವಿರ ಕಾಲ ಇರ್ದಡೇನು, ವಿಷಬಿಡುವುದೇ?
ಹಾವುಮೆಕ್ಕೆಯು ಹಣ್ಣಾದಡೇನು, ಮಧುರವಪ್ಪುದೇ?
ಅರಿಷಡ್ವರ್ಗದುರವಣಿಗೊಳಗಾದಡಾತ ಹಿರಿಯನೇ?
ಸಮತೆ ಸಮಾಧಾನ ತುಂಬಿ ತುಳುಕಿ,
ಸುಜ್ಞಾನಭರಿತವಾದಡಾತ ಹಿರಿಯನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದೆ
ಬರುಮಾತಿನಲ್ಲಿ ಹಿರಿಯನೆಂದಡೆ
ನಾಚಿತ್ತೆನ್ನ ಮನವು.
-ಸ್ವತಂತ್ರ ಸಿದ್ಧಲಿಂಗೇಶ್ವರ

ಹಿರಿಯತನವು ಅಹಂಕಾರದಿಂದ ಬರುವುದಿಲ್ಲ. ನಾನು ಹಿರಿಯ ಎಂದು ಹೇಳಿಕೊಳ್ಳುವುದರಿಂದ ಬರುವುದಿಲ್ಲ. ಹಿರಿಯರಿಗೆ ಬದ್ಧತೆ ಬೇಕು. ತಾನು ಸನ್ಮಾರ್ಗದಲ್ಲಿ ನಡೆದು, ಕಿರಿಯರಿಗೆ ಮಾದರಿಯಾಗುವಂತೆ ಇರಬೇಕು. ಅದುಬಿಟ್ಟು ಅರಿಷಡ್ವರ್ಗಗಳನ್ನು ಅಂತರಂಗದಲ್ಲಿ ತುಂಬಿಕೊಂಡಿದ್ದರೆ ಹಿರಿಯರೆನಿಸುವುದಿಲ್ಲ. ಕುಟಿಲ, ಕುಹಕ, ಮಿಥ್ಯೆ, ಪಿಸುಣತನಗಳನ್ನು ಹೊಂದಿದ್ದರೆ ಹಿರಿಯರೆನಿಸುವುದಿಲ್ಲ. ವಯಸ್ಸಾದ ಮಾತ್ರಕ್ಕೆ ಹಿರಿಯರು ಎನ್ನಲಾಗದು. ಏಕೆಂದರೆ, ಹಾವಿಗೆ ಸಾವಿರ ವರ್ಷ ವಯಸ್ಸಾದರೂ ಅದು ವಿಷಮುಕ್ತವಾಗಿರುವುದಿಲ್ಲ. ಹಾವುಮೆಕ್ಕೆಯ ಕಾಯಿ ಎಷ್ಟೇ ಕಳಿತು ಹಣ್ಣಾದರೂ ತನ್ನ ಕಹಿಯನ್ನು ಕಳೆದುಕೊಂಡಿರುವುದಿಲ್ಲ. ತನ್ನಲ್ಲಿ ಅರಿಷಡ್ಗುಣಗಳನ್ನು ಕಳೆದುಕೊಳ್ಳದೇ, ವಯಸ್ಸು ಅಥವಾ ಸ್ಥಾನದ ಕಾರಣಕ್ಕೆ ಹಿರಿಯನೆಂದರೆ, ಆ ಹಿರಿಯತನ ವಯೋವೃದ್ಧ ಹಾವಿನಂತೆ, ಹಣ್ಣಾದ ಹಾವುಮೆಕ್ಕೆಯ ಕಾಯಿಯಂತೆ! ಅಂತೆಯೇ ಸಮತೆ ಸಮಾಧಾನ ಸುಜ್ಞಾನಗಳು ಇದ್ದರೆ ಹಿರಿಯತನ ಬರುತ್ತದೆ ಎಂದು ಸ್ವತಂತ್ರ ಸಿದ್ಧಲಿಂಗೇಶ್ವರರು ತಿಳಿಸಿದ್ದಾರೆ. ಸಮತೆ ಸುಜ್ಞಾನ ಸಮಾಧಾನಗಳನ್ನು ಮರೆತು, ಹುಸಿ ಹಿರಿಯತನದ ಹಮ್ಮಿನಲ್ಲಿರುವವರಿಗೆ ಈ ವಚನ ಕಣ್ತೆರೆಸುವಂತಿದೆ.

-ಡಾ॥ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ
ಶ್ರೀ ಬಸವತತ್ತ್ವ ಪೀಠ, ದೊಡ್ಡಕುರುಬರಹಳ್ಳಿ, ಚಿಕ್ಕಮಗಳೂರು.
ಬಸವಕೇಂದ್ರ, ಶಿವಮೊಗ್ಗ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!