May 18, 2024

MALNAD TV

HEART OF COFFEE CITY

ರತ್ನಗಿರಿ ಬೋರೆಯಲ್ಲಿನ ಮಹಾತ್ಮಗಾಂಧಿ ಉದ್ಯಾನವನದ ಪ್ರವೇಶ ಶುಲ್ಕ ಹೆಚ್ಚಳ

1 min read
Increase in entry fee of Mahatma Gandhi Park in Ratnagiri Bore

Increase in entry fee of Mahatma Gandhi Park in Ratnagiri Bore

ರತ್ನಗಿರಿಯ ಬೋರೆಯಲ್ಲಿನ ಮಹಾತ್ಮಾಗಾಂಧಿ ಉದ್ಯಾನವನದ ಪ್ರವೇಶ ಶುಲ್ಕ ೨೦೧೮ರಲ್ಲಿ ಪರಿಷ್ಕರಣೆಗೊಂಡಿದ್ದು, ಮಕ್ಕಳಿಗೆ ರೂ. ೧೦ ಹಾಗೂ ವಯಸ್ಕರಿಗೆ ರೂ. ೨೦ ನಿಗದಿಯಾಗಿತ್ತು. ಇದೀಗ ಪ್ರವೇಶ ಶುಲ್ಕ ಮಕ್ಕಳಿಗೆ ರೂ.೨೦ ಮತ್ತು ವಯಸ್ಕರಿಗೆ ರೂ. ೪೦ ದರವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೆಶ್ ಅಧ್ಯಕ್ಷತೆಯಲ್ಲಿ ನಡೆದ ಮಹಾತ್ಮಾಗಾಂಧಿ ಉದ್ಯಾನವನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಳೆದ ವರ್ಷ ಉದ್ಯಾನವನ ನಿರ್ವಹಣೆಗೆ ರೂ.೧.೪೭ ಲಕ್ಷ ಖರ್ಚು ಭರಿಸಿದ್ದು, ಕೇವಲ ರೂ.೨.೧೬ ಲಕ್ಷ ಆದಾಯವಾಗಿದೆ. ಆದ್ದರಿಂದ ಉದ್ಯಾನವನದ ವ್ಯವಸ್ಥಿತ ನಿರ್ವಹಣೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಪ್ರವೇಶ ಶುಲ್ಕ ಹೆಚ್ಚಳ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪುಟಾಣಿ ರೈಲಿನ ಇಂಜಿನ್ ಪದೇ ಪದೇ ರಿಪೇರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ರೂ. ೫ ಲಕ್ಷ ವೆಚ್ಚದಲ್ಲಿ ಗುಣಮಟ್ಟದ ಇಂಜಿನ್ ಅನ್ನು ಖರೀದಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು. ಹಾಗೂ ಪುಟಾಣಿ ರೈಲಿನ ಟಿಕೆಟ್ ದರವು ಬಹಳ ಕಡಿಮೆಯಿದ್ದು, ದರವನ್ನು ಹೆಚ್ಚಿಸಲು ಸಮಿತಿಯ ಸದಸ್ಯರೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ತಿಳಿಸಿದರು.

ಸಂಗೀತ ಕಾರಂಜಿ, ವೀಕ್ಷಣಾ ಗ್ಯಾಲರಿ ಹಾಗೂ ಹಿರಿಯ ನಾಗರೀಕರಿಗೆ ವಿಶ್ರಾಂತಿ ಕೊಠಡಿಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಆಗಸ್ಟ್ ೧೫ ರೊಳಗೆ ಅವುಗಳಿಗೆ ಚಾಲನೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ನಂತರ ಉದ್ಯಾನವನದಲ್ಲಿರುವ ಎರಡು ಅಂಗಡಿಗಳಿಗೆ ಹೊಸದಾಗಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಅವರು ತಿಳಿಸಿದರು.

ವಾರದ ಕೊನೆಯ ಎರಡು ದಿನಗಳಲ್ಲಿ ಉದ್ಯಾನವನದಲ್ಲಿ ಫೋಟೋಶೂಟ್‌ಗೆ ಅವಕಾಶ ಕಲ್ಪಿಸಬಾರದು ಹಾಗೂ ಇನ್ನುಳಿದ ದಿನಗಳಲ್ಲಿ ಒಂದು ಕ್ಯಾಮೆರಾ ಛಾಯಾಚಿತ್ರಣಕ್ಕೆ ರೂ.೫೦೦ ಹಾಗೂ ಫೋಟೋಶೂಟ್‌ಗೆ ರೂ.೧೦೦೦ ದರ ನಿಗದಿಪಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಪುಟಾಣಿ ರೈಲು ಚಾಲಕರ ವೇತನ ಮಾಹೆಯಾನ ರೂ.೬೫೦೦ ಇದ್ದು, ಬೇಡಿಕೆಯಂತೆ ಅದನ್ನು ಹೆಚ್ಚಿಸಿ ದಿನಗೂಲಿ ರೂಪದಲ್ಲಿ ದಿನಕ್ಕೆ ರೂ.೩೫೦ ನೀಡುವಂತೆ ಅವರು ಆದೇಶಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ರತ್ನಗಿರಿ ಉದ್ಯಾನವನದ ಪ್ರವೇಶ ದ್ವಾರದಲ್ಲಿ  ಪ್ಲಾಸ್ಟಿಕ್ ನಿಷೇಧಿಸಿರುವ ಫಲಕವನ್ನು ಹಾಕಲು ತಿಳಿಸಿದರು ಹಾಗೂ ಉದ್ಯಾನವನದೊಳಗೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಎಸೆದಲ್ಲಿ ರೂ.೫೦೦ ದಂಡ ವಿಧಿಸುವಂತೆ ಸಮಿತಿಗೆ ಅವರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಶಾಲಾ ಪ್ರವಾಸದ ವೇಳೆಯಲ್ಲಿ ಖಾಸಗಿ ಶಾಲಾ ಮಕ್ಕಳಿಗೆ ರೂ.೫ ಪ್ರವೇಶ ದರ ನಿಗದಿಪಡಿಸಲು ಹಾಗೂ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲು ಸೂಚಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ, ಉದ್ಯಾನವನಕ್ಕೆ ಗೃಹರಕ್ಷಕ ದಳದ ೪ ಸಿಬ್ಬಂದಿಗಳನ್ನು ನಿಯೋಜಿಸಲು ಬೇಡಿಕೆ ಇದ್ದು, ಜಿಲ್ಲೆಯಲ್ಲಿ ಗೃಹರಕ್ಷಕರ ಕೊರತೆ ಇರುವ ಕಾರಣ ಗುತ್ತಿಗೆ ಆಧಾರದಲ್ಲಿ ಪ್ರತೀ ಸಿಬ್ಬಂದಿಗೆ ದಿನಕ್ಕೆ ರೂ.೩೮೦ರಂತೆ ವಾರದ ಕೊನೆಯ ಮೂರು ದಿನ ಗುತ್ತಿಗೆ ಪಡೆಯಲು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!