May 2, 2024

MALNAD TV

HEART OF COFFEE CITY

ಪ್ರಚಾರದ ಹೇಳಿಕೆ ನಿಲ್ಲಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ : ಅಂಶುಮಂತ್

1 min read

ಚಿಕ್ಕಮಗಳೂರು : ರಾಜಕೀಯ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಡಾ|| ಕೆ.ಪಿ. ಅಂಶುಮಂತ್‌ರವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಒತ್ತಾಯಿಸಿದ್ದಾರೆ.

 

ಕಾಂಗ್ರೆಸ್ ಮುಖಂಡರು ಸ್ಥಿಮಿತ ಕಳೆದುಕೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಆರ್.ಎಸ್.ಎಸ್ ಮತ್ತು ತಾಲಿಬಾನ್ ಕುರಿತು ಕೆ.ಪಿ.ಸಿ.ಸಿ. ಅಧ್ಯಕ್ಷ ದೃವನಾರಾಯಣ್ ನೀಡಿರುವ ಹೇಳಿಕೆಯ ಸಂದರ್ಭವನ್ನು ಸಚಿವರು ಮನಗಾಣದೆ ವಿಷಯಾಂತರ ಮಾಡಿ ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ಹೇಳಿದರು.

ವಿಜಯೋತ್ಸವ ಅಥವಾ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಿಹಿ ಹಂಚುವುದು ಮತ್ತು ಪರಸ್ಪರ ಅಭಿನಂದಿಸಿ, ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಭಾರತೀಯ ಸಂಸ್ಕೃತಿ. ಅದನ್ನು ಬಿಟ್ಟು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಬಂದೂಕಿನಿಂದ ಗುಂಡು ಹಾರಿಸುವುದು ನಮ್ಮ ಸಂಸ್ಕೃತಿಯಲ್ಲ. ಅದು ಕಾನೂನು ಬಾಹಿರ ಚಟುವಟಿಕೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಕೆ.ಪಿ.ಸಿ.ಸಿ. ಅಧ್ಯಕ್ಷ ದೃವನಾರಾಯಣ್ ಅವರು ಹೇಳಿಕೆ ನೀಡಿದ್ದಾರೆ. ಅದನ್ನು ವಿಷಯಾಂತರ ಮಾಡಿ ಸಚಿವರು ರಾಜಕೀಯವಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಒಂದು ದೇಶ ಭಕ್ತ ಪಕ್ಷವಾಗಿದ್ದು, ಅದು ಎಂದೂ ಭಯೋತ್ಪಾದನೆ ಬೆಂಬಲಿಸುವುದಿಲ್ಲ ಎಂದಿರುವ ಅವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ಪಕ್ಷ ಕಾಂಗ್ರೆಸ್. ಅದರ ನೆಲೆ ದೇಶದಲ್ಲಿ ಭದ್ರವಾಗಿದೆ. ನೆಲೆ ಕಳೆದುಕೊಳ್ಳುವಂತ ಸ್ಥಿತಿಯನ್ನು ಕಾಂಗ್ರೆಸ್ ಎಂದೂ ತಲುಪಿಲ್ಲ. ಸದಾ ದೇಶದ ಜನರ ಹಿತಕ್ಕಾಗಿ ಕಾಂಗ್ರೆಸ್ ಕೆಲಸ ಮಾಡುತ್ತದೆ. ನಮ್ಮ ಪಕ್ಷದ ಮುಖಂಡರು ಸ್ಥಿಮಿತ ಕಳೆದುಕೊಂಡು ಹೇಳಿಕೆಯನ್ನು ನೀಡುತ್ತಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಾಂಗ್ ನೀಡಿದ್ದಾರೆ.

ಜಿಲ್ಲೆಯಲ್ಲಿ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದರೆ, ಸಂಸದರಾದಾಗಿನಿಂದ ಇಲ್ಲಿಯವರೆಗೆ ಸಂಸತ್ತಿನಲ್ಲಿ ಜಿಲ್ಲೆಯ ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದ ಸಚಿವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ ರೈತರು ಕಳೆದ 9 ತಿಂಗಳಿಂದ ದೇಶದ ರಾಜಧಾನಿ ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರು ಅವರೊಂದಿಗೆ ಮಾತುಕತೆಗೆ ಮುಂದಾಗದಿರುವುದು ಈ ದೇಶದ ದುರಂತವೇ ಸರಿ ಎಂದು ಹೇಳಿದರು.

ಆಕ್ಸಿಜನ್,  ಔಷಧ ಸಮಸ್ಯೆಗಳಿಂದಾಗಿ ಕೋವಿಡ್ ಮಹಾ ಮಾರಿಗೆ ಈ ರಾಜ್ಯದಲ್ಲಿ ಮತ್ತು ನಮ್ಮ ಜಿಲ್ಲೆಯಲ್ಲಿ ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಲಸಿಕೆ ದೊರೆಯದೆ ಜನರು ಪರಿತಪಿಸುತ್ತಿದ್ದಾರೆ. ದೇಶದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಂಧನ ಬೆಲೆಗಳು ಏರಿಕೆ ಕಂಡಿವೆ. ಬೆಲೆಗಳು ಹೆಚ್ಚಾಗಿ ಆಹಾರ ಸಾಮಗ್ರಿಗಳು ಕೈಗೆಟುಕದಂತಾಗಿದೆ. ಈ ಬಗ್ಗೆ ಜನರ ಪರವಾಗಿ ಸಂಸತ್ತಿನ ಹೊರಗೆ ಮತ್ತು ಒಳಗೆ ಧ್ವನಿ ಎತ್ತುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸದೆ ಈ ರೀತಿಯ ಹೇಳಿಕೆಗಳನ್ನು ನೀಡಿ ಜನರ ಗಮನವನ್ನು ಬೇರೆಡೆ ಸೆಳೆಯುವ ಯತ್ನವನ್ನು ಸಚಿವರು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!