May 2, 2024

MALNAD TV

HEART OF COFFEE CITY

ಹಿರೇಕೊಳಲೆ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಣೆ

1 min read

ಚಿಕ್ಕಮಗಳೂರು-ಗುರತ್ವಾಕರ್ಷಣೆ ಮೂಲಕ ನಗರದ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವ ಹಿರೇಕೊಳಲೆ ಕೆರೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.ಅವರು ಇಂದು ನಗರಸಭೆಯಿಂದ ಏರ್ಪಡಿಸಿದ್ದ ನಗರಕ್ಕೆ ನೀರುಣಿಸುವ ಹಿರೇಕೊಳಲೆ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಗುರತ್ವಾಕರ್ಷಣೆ ಮೂಲಕ ನೀರನ್ನು ನಗರಕ್ಕೆ ಸರಬರಾಜು ಮಾಡುವ ಉದ್ದೇಶದಿಂದ ಹಿಂದೆ ಮೈಸೂರು ಮಹಾರಾಜರ ಕಾಲದಲ್ಲಿ ಹಿರೇಕೊಳಲೆ ಕೆರೆ ನಿರ್ಮಾಣ ಮಾಡಿದ್ದು, ರಾಜ್ಯದಲ್ಲಿಯೇ ಇದು ಮೊದಲಾಗಿದೆ. ಈಗ ಯಗಚಿ ಜಲಾಶಯದಿಂದ ಲಕ್ಷಾಂತರ ರೂಗಳನ್ನು ಖರ್ಚು ಮಾಡುತ್ತಿದ್ದು ಆದರೆ ಖರ್ಚಿಲ್ಲದೆ ನೀರು ಸರಬರಾಜು ಮಾಡುತ್ತಿರುವ ಹಿರೇಕೊಳಲೆ ಕೆರೆಯನ್ನು ಅಭಿವೃದ್ಧಿಪಡಿಸಿ ರಕ್ಷಣೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸಲಹೆ ನೀಡಿದರು.

ಮಲೆನಾಡಿನಲ್ಲಿ ಮಳೆ ಬೆಳೆ ಸಮೃದ್ಧವಾಗಿದ್ದು, ಲಕ್ಯಾ ಹೋಬಳಿ ಬಯಲು ಭಾಗದಲ್ಲಿ ಬರದ ಪರಿಸ್ಥಿತಿ ಇದ್ದು, ಕುಡಿಯುವ ನೀರಿಗೂ ತೊಂದರೆಯಾಗುವ ಲಕ್ಷಣ ಇದೆ. ಜಿಲ್ಲೆ ದೀಪದ ಕೆಳಗೆ ಕತ್ತಲೆ ಎಂಬಂತಾಗಿದ್ದು, ಇಲ್ಲಿ ಉಗಮಿಸುವ ನದಿಗಳು ಬೇರೆ ಜಿಲ್ಲೆಗಳಿಗೆ ನೀರೊದಗಿಸುತ್ತಿವೆ. ಕೆರೆ ತುಂಬಿಸುವ ಯೋಜನೆ ಪ್ರಾರಂಭಿಸಿದ್ದು ದಾಸರಹಳ್ಳಿ ಕೆರೆ, ಮಾದರಸನ ಕೆರೆ ತುಂಬಿಸಲು ಯೋಜನೆ ಸಿದ್ದಪಡಿಸಲಾಗುತ್ತಿದೆ. ಈ ಕೆರೆಗಳು ಭರ್ತಿಯಾದರೆ ದೇಶದ ಬೆನ್ನೆಲುಬಾಗಿರುವ ರೈತನ ಕೈ ಬಲಪಡಿಸಿದಂತಾಗುತ್ತದೆ ಎಂದು ಹೇಳಿದರು.
ಹಿರೇಕೊಳಲೆ ಕೆರೆ ಅಂಗಳವನ್ನು ಪ್ರವಾಸಿ ತಾಣ ಮಾಡಿ ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಕುಡಿಯುವ ನೀರಿಗೆ ತ್ಯಾಜ್ಯಗಳನ್ನು ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.ಹಿಂದೆ ಹಿರೇಕೊಳಲೆ ನೀರು ಬಸವನಹಳ್ಳಿ ಕೆರೆ, ಕೋಟೆ ಕೆರೆ, ಹಿರೇಮಗಳೂರು ಕೆರೆ ಮೂಲಕ ಚೈನ್‍ಲಿಂಕ್ ಆಗಿ ಯಗಚಿ ಜಲಾಶಯ ತಲುಪುತ್ತಿತ್ತು. ರಾಮೇಶ್ವರ ಕೆರೆ ನಿರ್ಮಾಣವಾದ ನಂತರ ಕೋಡಿ ಬಿದ್ದ ನೀರು ಉಪ್ಪಳ್ಳಿ ಹಳ್ಳಕ್ಕೆ ಹೋಗುವಂತೆ ಮಾಡಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಹಿರೇಕೊಳಲೆ ನೀರು ಬಸವನಹಳ್ಳಿ ಕೆರೆಗೆ ಹೋಗುವಂತೆ ಮಾಡಲು ನೀಲಿ ನಕ್ಷೆ ತಯಾರಿಸಿ ಕ್ರಮವಹಿಸಬೇಕೆಂದು ಹೇಳಿದರು.

ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಪ್ರದೇಶಗಳಲ್ಲಿ ಅಂತರ್ಜಲ ಹುಟ್ಟುವ ಸ್ಥಳದಲ್ಲಿ ಪ್ರವಾಸಿಗರು ಹಾಕಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ವಿಶಾಧಿಸಿದ ಅವರು ಈ ಬಗ್ಗೆ ತಂತ್ರಜ್ಞರನ್ನು ಕರೆಸಿ ಸ್ಥಳ ಪರಿಶೀಲಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುವುದು. ಚಿಕ್ಕಮಗಳೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಭರವಸೆ ನೀಡಿದರು.ಇವುಗಳ ಜೊತೆಗೆ ಹೈನುಗಾರಿಕೆ, ನೀರಾವರಿ ಯೋಜನೆಗಳ ಬಗ್ಗೆ ಈಗಾಗಲೇ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದು, ಚಿಕ್ಕಮಗಳೂರು ನಗರದ ಹಾಗೂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷರಾಜಕಾರಣ ಮಾಡದೆ ಕೆಲಸ ಮಾಡುತ್ತೇನೆಂದು ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಮುಗಿದ ನಂತರ ಆಗಸ್ಟ್ 1 ರಿಂದ ಜನಸ್ನೇಹಿ ಆಡಳಿತ ನಡೆಸುವಂತೆ ನೂತನ ಅಧಿಕಾರಿಗಳನ್ನೊಳಗೊಂಡ ಸಭೆ ಕರೆದು ಚರ್ಚಿಸಿ ಸೂಚನೆ ನೀಡುತ್ತೇನೆ, ಇದರಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಗರಸಭಾಧ್ಯಕ್ಷ ವರಸಿದ್ದಿವೇಣುಗೋಪಾಲ್ ಮಾತನಾಡಿ ಹಿರೇಕೊಳಲೆ ಕೆರೆ ಸಮಗ್ರ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಬೇಕಾದ ಅನುದಾನ ನಗರಸಭೆಯಲ್ಲಿ ಲಭ್ಯವಿದ್ದು, ಈಗಿರುವ ನೀರಿನ ಪ್ರಮಾಣದಷ್ಟೇ ಹೆಚ್ಚು ನೀರು ಸಂಗ್ರಹವಾಗುವ ರೀತಿ ಕ್ರಮ ಕೈಗೊಳ್ಳಲಾಗುವುದೆಂದರು.
ಹಿರೇಕೊಳಲೆ ಕೆರೆಯಿಂದ ಈಗ ನಗರದ 15 ವಾರ್ಡ್‍ಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಹೊಸ ಕಾಮಗಾರಿ ಪೂರ್ಣಗೊಂಡರೆ ನಗರದ ಎಲ್ಲಾ ವಾರ್ಡ್‍ಗಳಿಗೂ ನೀರನ್ನು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಪೂರ್ಣಗೊಂಡಿದ್ದು ಸಧ್ಯದಲ್ಲೇ ಒತ್ತುವರಿ ತೆರೆವುಗೊಳಿಸಲಾಗುವುದೆಂದು ಎಚ್ಚರಿಸಿದರು.
ನಗರದ ಕತ್ರಿ ಮಾರಮ್ಮ ದೇವಸ್ಥಾನದಿಂದ ಕಣಿವೆ ರುದ್ರೇಶ್ವರ ದೇವಸ್ಥಾನದವರೆಗೆ ರಸ್ತೆಗೆ ಎಲ್‍ಇಡಿ ಬಲ್ಪ್ ಅಳವಡಿಸುವ ಕಾರ್ಯ ವಿಳಂಭವಾಗಿದ್ದು, ಮಳೆಗಾಲ ಮುಗಿದ ಬಳಿಕ ಕ್ರಮ ವಹಿಸುತ್ತೇವೆ ಜೊತೆಗೆ ಈಗಾಗಲೇ ನಗರದಲ್ಲಿ ಅಳವಡಿಸಲಾಗಿರುವ ಬೀದಿ ದೀಪಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸಂಬಂಧಿಸಿದ ಗುತ್ತಿಗೆದಾರನಿಗೆ ನೋಟೀಸ್ ನೀಡಿದ್ದು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಕೆರೆಗೆ ಬಾಗಿನ ಸಮರ್ಪಿಸಿದ ಸಂದರ್ಭದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್. ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಜಿ.ಪಂ ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ನಗರಸಭೆ ಆಯುಕ್ತ ಬಸವರಾಜ್, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!