April 29, 2024

MALNAD TV

HEART OF COFFEE CITY

ಗೌರಿಕಾಲುವೆ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ

1 min read

ಚಿಕ್ಕಮಗಳೂರು-ನಗರ ಸಭಾ ವ್ಯಾಪ್ತಿಯ 32 ನೇ ವಾರ್ಡ್‍ನ ಗೌರಿಕಾಲುವೆ ಬಡಾವಣೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ರೂ. 15 ಲಕ್ಷ ವೆಚ್ಚದ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಗುರುವಾರ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಭೂಮಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು ನಗರಸಭೆಗೆ ಜನಪ್ರತಿನಿಧಿಗಳ ಹೊಸ ಆಡಳಿತ ಮಂಡಳಿ ಬಂದ ಬಳಿಕ ನಗರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ, ನಗರದೆಲ್ಲೆಡೆ ವಿವಿಧ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಕ್ಷೇತ್ರದ ಶಾಸಕರು ನಗರದ ಪ್ರತಿ ವಾರ್ಡ್‍ನಲ್ಲೂ ಅಂಗನವಾಡಿಗಳ ನಿರ್ಮಾಣವಾಗಬೇಕು ಈ ಮೂಲಕ ಚಿಣ್ಣರು ಚಟುವಟಿಕೆ ಮೂಲಕ ಶಿಕ್ಷಣ ಪಡೆಯಬೇಕು ಎಂದು ಆಶಯ ಹೊಂದಿ 15 ಕ್ಕೂ ಹೆಚ್ಚು ಅಂಗನವಾಡಿ ತೆರೆಯಲು ಅನುದಾನ ಮೀಸಲಿಟ್ಟಿದ್ದರು ಅದರಂತೆ 32 ನೇ ವಾರ್ಡ್ ಗೌರಿ ಕಾಲುವೆ ಬಡಾವಣೆಯಲ್ಲಿ ರೂ. 15 ಲಕ್ಷ ಅನುದಾನದಲ್ಲಿ ಸುಸ್ಸಜ್ಜಿತವಾದ ಅಂಗನವಾಡಿ ಕೇಂದ್ರ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಂಗನವಾಡಿ ಕೇಂದ್ರವನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳ ನಿರ್ಮಾಣ ಸಂಖ್ಯೆಯನ್ನು ಅಧಿಕಗೊಳಿಸಿ ಆದ್ಯತೆ ಮೇರೆಗೆ ಹಂತ-ಹಂತವಾಗಿ ಕಟ್ಟಲಾಗುವುದು, ಅದಕ್ಕಾಗಿ ನಗರಸಭೆಯಲ್ಲಿಯೂ ಅನುದಾನ ಮೀಸಲಿಟ್ಟಿರುವ ಬಗ್ಗೆ ತಿಳಿಸಿದರು.
ನಗರದಲ್ಲಿ ಕಸಸಂಗ್ರಹಣೆ ಶುಲ್ಕ ಏರಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು 2021 ರ ಅವಧಿಯಲ್ಲೇ ಕಸದ ಶುಲ್ಕ ಏರಿಕೆ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ 40 ರಿಂದ 80 ರೂಗಳ ವರೆಗೆ ಶುಲ್ಕ ಏರಿಸುವಂತೆ ಅಭಿಪ್ರಾಯ ವ್ಯಕ್ತವಾಗಿದ್ದು ಜನಸಾಮಾನ್ಯರಿಗೆ ಹೊರೆಯಾಗದಂತೆ 10 ರೂಗಳ ಶುಲ್ಕ ಏರಿಕೆ ಮಾಡಲಾಗಿದೆ. ಇದನ್ನು ಅರಿಯದೇ ಕಾಂಗ್ರೆಸ್ ಪಕ್ಷ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಟೀಕೆ ಮಾಡುವುದೇ ಕಾಂಗ್ರೆಸ್ ಖಯಾಲಿ ಎಂದು ಛೇಡಿಸಿದರು.

ಕೇಲವ ಬಿಜೆಪಿ ಬೆಂಬಲಿತ ಸದಸ್ಯರ ವಾರ್ಡ್‍ಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂಬ ಪ್ರತಿಪಕಗಳ ಟೀಕೆಗೆ ಮಾತನಾಡಿ ನಗರದಲ್ಲಿ ಯಾವುದೇ ವಾರ್ಡ್‍ಗಳಿಗೂ ಪಕ್ಷಪಾತ ನಡೆಸಿ ಅನುದಾನ ಹಂಚಿಕೆ ಮಾಡಿಲ್ಲ, ನಗರವನ್ನು ಅಭಿವೃದ್ಧಿಯಾಗಿಸಿಕೊಂಡು ಎಲ್ಲಾ ವಾರ್ಡ್‍ಗಳಿಗೂ ಸಮಾನ ಆದ್ಯತೆ ನೀಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ನಗರಸಭೆ ಸದಸ್ಯೆ ಭವ್ಯಾಮಂಜುನಾಥ್ ಮಾತನಾಡಿ 32 ನೇ ವಾರ್ಡ್‍ನಲ್ಲಿ ಅಂಗನವಾಡಿ ಕೊರತೆ ಇತ್ತು. ಈ ಬಗ್ಗೆ ಶಾಸಕರು ಮುತುವರ್ಜಿ ವಹಿಸಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಇದರಿಂದ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಯುಜಿಡಿ, ಕುಡಿಯುವ ನೀರಿನ ಸಮಸ್ಯೆ ಇದ್ದು ಇದನ್ನು ಬಗೆಹರಿಸುವಂತೆ ಅಧ್ಯಕ್ಷರ ಗಮನಕ್ಕೆ ತರಲಾಗಿದೆ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ರೂಬೆನ್‍ಮೊಸಸ್, ಜಮ್‍ಶೀದ್, ಗಿರೀಶ್, ಧರ್ಮಶೆಟ್ಟಿ, ಮುಖಂಡರಾದ ಜವರೇಗೌಡ, ವಿಶಾಲಮ್ಮ, ನಿಂಗಮ್ಮ, ತಾರಮ್ಮ, ಭೂಸೇನಾ ನಿಗಮದ ಅಭಿಯಂತರ ವಿನಯ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!