May 15, 2024

MALNAD TV

HEART OF COFFEE CITY

ಸಂವಿಧಾನದ ಆಶಯವನ್ನು ಉಳಿಸುವ ಪ್ರಯತ್ನ ನಡೆಯಬೇಕು : ಎಸ್.ಎಲ್.ಭೋಜೇಗೌಡ

1 min read

ಚಿಕ್ಕಮಗಳೂರು,  ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರು ದೇಶಕ್ಕೆ ನೀಡಿದ ಸಂವಿಧಾನದ ಆಶಯಕ್ಕೆ ಚ್ಯುತಿಯಾಗದಂತೆ ಪ್ರತಿಯೊಬ್ಬರು ಅದನ್ನು ಉಳಿಸುವ ಪ್ರಯತ್ನ ಮಾಡಿದಾಗ ಅಂಬೇಡ್ಕರ್ ಜಯಂತಿಗೆ ಪರಿಪೂರ್ಣ ಅರ್ಥ ದೊರೆಯುತ್ತದೆ ಎಂದು ವಿಧಾನಪರಿಷತ್ ಶಾಸಕ ಎಸ್.ಎಲ್.ಭೋಜೇಗೌಡ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಖಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಧರ್ಮವೇ ಅತ್ಯುನ್ನತ, ಅದರ ಸಾರವೇ ಶ್ರೇಷ್ಠ ಎನ್ನುವವರು ಕೋಮುವಾದಿಗಳು. ಇನ್ನೊಂದು ಧರ್ಮವನ್ನು ಸಹ ಪ್ರೀತಿ ವಿಶ್ವಾಸದಿಂದ ಕಂಡಾಗ, ಸಂವಿಧಾನದ ಆಶಯದಂತೆ ಸರ್ವಧರ್ಮ ಭಾವೈಕ್ಯತೆಯ ಸಂದೇಶವನ್ನು ಪಸರಿಸಬಹುದು ಎಂದರು.

ಅಂಬೇಡ್ಕರ್ ಅವರು ತಮ್ಮ ಮನಸ್ಸಿನ ಮೇಲಾದ ಗಾಯಕ್ಕೆ ಪ್ರತಿಯಾಗಿ ಸೆಟೆದು ನಿಂತು, ಶಿಕ್ಷಣದ ಕ್ರಾಂತಿಯನ್ನು ಹುಟ್ಟು ಹಾಕಿದರು. ಹಾಗಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕದಿದ್ದರೆ, ಅಸ್ಪೃಶ್ಯತೆ ಹಾಗೂ ಅಸಮಾನತೆಯು ಸಮಾಜದಿಂದ ನಿರ್ಮೂಲನೆಯಾಗುವುದಿಲ್ಲ ಎಂದರು.ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಹಲವಾರು ವಿಷಯಗಳಲ್ಲಿ ಪದವಿ ಪಡೆದಿದ್ದ ಅಂಬೇಡ್ಕರ್, ಅವರ ಜ್ಞಾನದ ಹಸಿವನ್ನು ನೀಗಿಸಲು ೫೦,೦೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಅವರ ಆದರ್ಶಗಳನ್ನು ಇಂದಿಗೂ ವಿಶ್ವದ ಹಲವಾರು ದೇಶಗಳು ಅನುಸರಿಸುತ್ತಿವೆ ಎಂದರು.ಸಂವಿಧಾನದ ಮುಖಾಂತರ ದೀನ ದಲಿತರಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಅಂಬೇಡ್ಕರ್ ದೊರಕಿಸಿಕೊಟ್ಟರು ಎಂದರು.
ಸಾಹಿತಿ ಪ್ರೊ. ಎನ್.ಆರ್. ಶಿವರಾಂ ಮಾತನಾಡಿ , ಅಂಬೇಡ್ಕರ್ ಅವರ ದೇಶಪ್ರೇಮ, ಮಹಿಳಾ ಪರ ಧ್ವನಿ ಹಾಗೂ ಸಂವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ಉಪನ್ಯಾಸ ನೀಡಿದರು.
ಅಂಬೇಡ್ಕರ್ ಅವರಿಗೆ ಸಮಾಜವು ವಿಷವುಣಿಸಿದರೂ, ಅವರು ಸಮಾಜಕ್ಕೆ ಅಮೃತವನ್ನು ನೀಡಿದರು. ಹಾಗೆಯೇ ಪ್ರತಿಯೊಬ್ಬರು ಇತಿಹಾಸವನ್ನು ತಿಳಿದು ಅರಿತುಕೊಂಡು ಅದರಿಂದ ಸೇಡನ್ನು ತೀರಿಸಿಕೊಳ್ಳಲು ಬಯಸದೇ, ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಅಂಬೇಡ್ಕರ್ ಅವರ ಮಾರ್ಗದರ್ಶನದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಮಾರ್ಗದಲ್ಲಿ ನಾವು ಸಾಗಬೇಕು. ಶಿಕ್ಷಣದ ಮೂಲಕ ಅರಿವು ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು, ಸಂಘಟಿತರಾಗಿ ನಮ್ಮ ಬದುಕು ಕಟ್ಟಿಕೊಳ್ಳಬೇಕು. ಸಂಘರ್ಷಗಳು ಅಥವಾ ಹೋರಾಟಗಳು ಕೇವಲ ಸ್ವಾರ್ಥ ಹಾಗೂ ಸಂಪಾದನೆಯ ನೆಪವಾಗದೆ, ಸಮಾಜದ ಹಿತಕ್ಕಾಗಿ ನಡೆಯಬೇಕು ಎಂದರು.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಹರೀಕಾರ ಹಾಗೂ ದೃಷ್ಟಾರ. ಭವಿಷ್ಯದ ಸಮಸ್ಯೆಗಳಿಗೆ ದೂರದೃಷ್ಟಿಯ ಯೋಚನೆಯಿಂದ ಪರಿಹಾರ ಒದಗಿಸುತ್ತಿದ್ದರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್.ಎಂ.ಹೆಚ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ.ಚೈತ್ರ.ಬಿ.ವಿ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!