April 29, 2024

MALNAD TV

HEART OF COFFEE CITY

ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಬದುಕು ಎಲ್ಲರಿಗೂ ಮಾದರಿ

1 min read

ಚಿಕ್ಕಮಗಳೂರು-ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ, ದಿವಂಗತ ಶ್ರೀ. ಡಾ.ಶಿವಕುಮಾರ ಸ್ವಾಮೀಜಿಯವರ ಬದುಕು ಎಲ್ಲರಿಗೂ ಮಾದರಿ ಎಂದು ಬಸವ ತತ್ವ ಪೀಠದ ಪೀಠಾಧ್ಯಕ್ಷರಾದ ಡಾ. ಬಸವಮರುಳ ಸಿದ್ಧ ಸ್ವಾಮೀಜಿಗಳು ಸ್ಮರಿಸಿದರು.
ನಗರದ ಐಐಟಿ ವೃತ್ತದ ಬಳಿ ತರಳುಬಾಳು ಭವನದ ಅವರಣದoಲ್ಲಿ ಆಯೋಜಿಸಿದ್ದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ 3ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹನ್ನೆರಡನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಾನ್ ಚೇತನ ಸಿದ್ಧಗಂಗಾ ಶ್ರೀಗಳು. 111 ವರ್ಷಗಳ ಬದುಕಿದ ಅವರ ವ್ಯಕ್ತಿತ್ವ್ವ ಎಲ್ಲರಿಗೂ ಮಾದರಿ ಎಂದರು.
ಲಿಂಗಪೂಜೆ ಮಾಡುವ ಮೂಲಕ ಆತ್ಮಬಲವನ್ನು ಹೆಚ್ಚಿಸಿಕೊಂಡು ಸಮಾಜದ ಉದ್ಧಾರಕ್ಕೆ ಶ್ರಮಿಸಿದವರು. ಅನ್ನದಾಸೋಹದ ಜತೆಗೆ ಜ್ಞಾನ ದಾಸೋಹವನ್ನು ನೀಡುವ ಮೂಲಕ ಉದಾತ್ತ ತತ್ವಗಳನ್ನು ಜಗತ್ತಿಗೆ ಸಾರಿದವರು ಎಂದು ಸ್ಮರಣೆ ಮಾಡಿದರು.
ತನುವನ್ನು ಗುರುವಿಗೆ, ಮನವನ್ನು ಲಿಂಗಕ್ಕೂ ಹಾಗೂ ಧನವನ್ನು ಜಂಗಮನಿಗೂ ನೀಡಬೇಕು ಎಂಬ ಶರಣರ ಸಂದೇಶವನ್ನು ಪಾಲಿಸಿದವರು. 12ನೇ ಶತಮಾನದ ಬಸವಣ್ಣನವರ ಕಾಯಕವೇ ಕೈಲಾಸ, ನಿತ್ಯ ದಾಸೋಹ ತತ್ವದ ಕೈಂಕರ್ಯವನ್ನು ತಮ್ಮಲ್ಲಿ ತೊಡಗಿಸಿಕೊಂಡವರು. ಅನ್ನ, ಅರಿವು ಆಶ್ರಯದ ಮೂಲಕ ದಾರಿ ದೀಪವಾದವರು ಎಂದರು.
ಡಾ.ಮುರುಳೀಧರ್ ಮಾತನಾಡಿ ತುಮಕೂರಿನ ಸಿದ್ದಗಂಗಾ ಶ್ರೀಗಳು ಅನ್ನದಾಸೋಹ, ಜ್ಞಾನ ದಾಸೋಹದ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ನಡೆದಾಡುವ ದೇವರು. ಅವರ ಸಮಯ ಪಾಲನೆ, ಶಿಸ್ತು, ಸಂಯಮವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. 3ನೇಪುಣ್ಯಸ್ಮರಣೆಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಮಲ್ಲೇಶಪ್ಪ ಮಾತನಾಡಿ ತ್ರಿವಿಧ ದಾಸೋಹಿ ಸಿದ್ದಗಂಗೆಯ ಶ್ರೀಗಳು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದ ಅಕ್ಷರ ದಾಸೋಹಿಗಳು, ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ ಎಂದು ತಮ್ಮ ಪ್ರವಚನಗಳಲ್ಲಿ ಹೇಳುತ್ತಿದ್ದ ಸಿದ್ದಗಂಗಾ ಶ್ರೀಗಳು, ತಮ್ಮ ಸ್ವಂತ ಊರಿನಲ್ಲೇ ಇದ್ದ ಮಠವೊಂದರಲ್ಲಿ ಅಕ್ಷರಾಭ್ಯಾಸ ಮಾಡಿದವರು ಎಂದರು.
ರಾಜಶೇಖರ್ ಮಾತನಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಹಲವು ದಶಕಗಳಿಂದ ವಿದ್ಯಾದಾನ ಮಾಡುತ್ತಾ, ತ್ರಿವಿಧ ದಾಸೋಹಿಗಳು ಎನಿಸಿಕೊಂಡ ಶ್ರೀಗಳು, ತಮ್ಮ, ಸೇವಾ ಮನೋಭಾವ, ಶ್ರಮದಿಂದ ಸಿದ್ದಗಂಗಾ ಮಠವನ್ನು ಆಗಸದೆತ್ತರಕ್ಕೆ ಬೆಳೆಸಿದವರು ಎಂದು ಸ್ಮರಣೆ ಮಾಡಿದರು.
ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಜಿ. ಸೋಮಶೇಖರಪ್ಪ ಮಾತನಾಡಿ ಬಡತನ- ಹಸಿವು ಹೋಗಲಾಡಿಸಲು, ಜನರಿಗೆ ಉತ್ತಮ ಆರೋಗ್ಯ, ಶಿಕ್ಷಣ ದೊರೆಯಲು ಅವರು ಮಾಡಿದ ಸೇವೆ ಅನುಪಮವಾದದ್ದು, ಸಾಮಾಜಿಕ ಸೇವೆಯಲ್ಲಿ ಮಾದರಿ ಎನಿಸುವ ಕಾರ್ಯಗಳನ್ನು ಮಾಡಿದ್ದು ಅವರ ಸ್ಮರಣೆ ನಿರಂತರವಾಗಿರಬೇಕು ಎಂದು ತಿಳಿಸಿದರು


ನಡೆದಾಡುವ ದೇವರು ಎನಿಸಿಕೊಂಡ ಡಾ.ಶಿವಕುಮಾರ ಶ್ರೀಗಳು ಸಿದ್ದಗಂಗಾ ಮಠದ ಮೂಲಕ ಹತ್ತಾರು ಲಕ್ಷ ಮಂದಿಯ ಬದುಕಿಗೆ ಬೆಳಕಾದ, ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ಚೇತನ. ಯಾವುದೇ ಜಾತಿ, ಮಥ, ಪಂಥ ಎನ್ನದೇ ಎಲ್ಲರಿಗೂ ಶಿಕ್ಷಣ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮನೋಜ್, ಪ್ರಸನ್ನ, ವಿಜಯ್‍ಕುಮಾರ್, ದಿನೇಶ್ ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!