May 6, 2024

MALNAD TV

HEART OF COFFEE CITY

ವೀರಯೋಧನಿಗೆ ಅಂತಿಮ ನಮನ..!

1 min read

 

 

ಚಿಕ್ಕಮಗಳೂರು: ಪಟಾಕಿ ತೆಗೆದುಕೊಂಡು ದೀಪಾವಳಿ ಹಬ್ಬಕ್ಕೆ ಬರ್ತೀನಿ ಅಂತಾ ಜಮ್ಮುವಿನಲ್ಲಿದ್ದ ಯೋಧ ಒಂದು ವಾರದ ಹಿಂದೆಯಷ್ಟೇ ತನ್ನಿಬ್ಬರು ಮಕ್ಕಳಿಗೆ ಕರೆ ಮಾಡಿ ಪ್ರೀತಿಯಿಂದ ಮಾತನಾಡಿದ್ರು. ಇನ್ನೇನು ಹಬ್ಬಕ್ಕೆ ಅಪ್ಪ ಬರ್ತಾರೆ ಅಂತಾ ಕಾಯುತ್ತಿದ್ದ ಮಕ್ಕಳಿಗೆ ಅದೊಂದು ಸುದ್ದಿ ಬರ ಸಿಡಿಲಿನಂತೆ ಬಡಿದಿತ್ತು. ಬರೋಬ್ಬರಿ 20 ವರ್ಷ ಭಾರತಾಂಬೆಯ ಸೇವೆಯನ್ನ ಮಾಡಿದ್ದ ಆ ಯೋಧ ಇಂದು ತವರಿಗೆ ಮರಳಿದ್ದು ಹುತಾತ್ಮನಾಗಿ. ಊರಿಗೆ ಬಂದ ಸೈನಿಕನ ಪಾರ್ಥಿವ ಶರೀರ ನೋಡಿ ಮಕ್ಕಳು, ತಂದೆ-ತಾಯಿ, ಪತ್ನಿಗೆ ಆಕಾಶವೇ ಕೆಳಗೆ ಬಿದ್ದಂತಾದ್ರೆ ಸಾವಿರಾರು ಜನರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿ ಕಣ್ಣೀರಿನ ವಿದಾಯ ಹೇಳಿದ್ರು. ಹೌದು, ಕಳೆದವಾರವಷ್ಟೇ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಜಮ್ಮುವಿನಿಂದ ಮನೆಗೆ ಕರೆ ಮಾಡಿದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿಳವಾಲ ಗ್ರಾಮದ ವೀರಯೋಧ ಶೇಷಪ್ಪ ದೀಪಾವಳಿಗೆ ಬರ್ತೀನಿ ಅಂತಾ ಹೇಳಿದ್ರು. ಇನ್ನೇನು ಅಪ್ಪ ಹಬ್ಬಕ್ಕೆ ಬರ್ತಾರೆ ಅಂತಾ ಗ್ರಾಮದಲ್ಲಿ ಶೇಷಪ್ಪನವರ ಇಬ್ಬರು ಮಕ್ಕಳು ದಿನಗಳನ್ನ ಎಣಿಸುತ್ತಾ ದಾರಿ ನೋಡುತ್ತಿದ್ರು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು, ಕರುನಾಡಿನ ವೀರಯೋಧ ಇಂದು ತನ್ನೂರಾದ ಕಡೂರಿಗೆ ಬಂದಿದ್ದು ಹುತಾತ್ಮನಾಗಿ. ಎಲ್ಲಿ ನೋಡಿದ್ರೂ ಜನವೋ ಜನ.! ಒಂದೆಡೆ ಬೋಲೋ ಭಾರತ್ ಮಾತಾ ಕೀ ಜೈ, ವಂದೇ ಮಾತರಾಂ ಅನ್ನೋ ಘೋಷಣೆ..! ಇನ್ನೊಂದೆಡೆ ಜೈ ಜವಾನ್, ಜೈ ಕಿಸಾನ್.. ಶೇಷಪ್ಪ, ಅಮರ್ ರಹೇ.. ಅನ್ನೋ ಪ್ರಾರ್ಥನೆ.! ದುಃಖವನ್ನ ತಡೆಹಿಡಿಯಲಾರದೇ ವೀರಯೋಧನ ಮಡದಿ, ತಂದೆ-ತಾಯಿ, ಮಕ್ಕಳ ರೋಧನೆ ನೆರೆದಿದ್ದ ಸಾವಿರಾರು ಜನರ ಕರುಳು ಹಿಂಡುವಂತಿತ್ತು..

 

ಜಮ್ಮುವಿನ ಬಿಎಸ್ಎಫ್ನಲ್ಲಿ ಮೆಕ್ಯಾನಿಕ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಷಪ್ಪನವರು ಒಂದು ವಾರದ ದಿನದ ಹಿಂದೆ ವಾಹನ ರಿಪೇರಿ ಮಾಡುವಾಗ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರವಾದ ಗಾಯವಾಗಿತ್ತು. ಅಂದಿನಿಂದಲೂ ಕೋಮಾದಲ್ಲಿದ್ದ ಶೇಷಪ್ಪನವರು ಕಳೆದ ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ರು. ಕಳೆದ ಇಪ್ಪತ್ತು ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ, ಸಾವಿರಾರು ಸೈನಿಕರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಿದ್ರು. ಆದ್ರೆ ತಾನೇ ವಾಹನ ರಿಪೇರಿ ಮಾಡುವಾಗ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರವಾದ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿ, ಕೋಮಾಕ್ಕೆ ಹೋಗುವಂತಾಯ್ತು. ಸತತ 6 ದಿನ ಜೀವನ್ಮರಣ ಹೋರಾಟ ನಡೆಸಿದ ಯೋಧನಿಗೆ ಕೊನೆಗೂ ಸಾವನ್ನ ಗೆಲ್ಲಲು ಸಾಧ್ಯವೇ ಆಗಲಿಲ್ಲ. ಕಡೂರು ತಾಲೂಕಿನ ಬಿಳುವಾಲ ಗ್ರಾಮದ ಬಿ.ಕೆ ಶೇಷಪ್ಪನವರ ಮೃತದೇಹ ಆಗಮಿಸುತ್ತಲೇ ಸಾವಿರಾರು ಜನರು ವೀರಯೋಧನಿಗೆ ಜೈಕಾರ ಹಾಕಿ ಭಾರತ್ ಮಾತಾ ಕೀ ಜೈ, ಶೇಷಪ್ಪ ಅಮರ್ ರಹೇ ಅನ್ನೋ ಘೋಷಣೆ ಕೂಗ ತೊಡಗಿದ್ರು. ಕಡೂರು ಪಟ್ಟಣದಿಂದ ಬಿಳುವಾಲ ಗ್ರಾಮದವರೆಗೂ ಮೆರವಣಿಗೆ ಮೂಲಕ ಸಾಗಿ, ಬಿಳುವಾಲದ ಸರಕಾರಿ ಫ್ರೌಢಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಊರಿನ ಜನರು ಮನೆ ಮಗನನ್ನೇ ಕಳೆದುಕೊಂಡ ರೀತಿಯಲ್ಲಿ ಕಣ್ಣೀರಿಟ್ರೆ, ಶೇಷಪ್ಪನವರ ಪತ್ನಿ, ತಂದೆ-ತಾಯಿ, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತು. ತನ್ನ 20 ವರ್ಷ ಸೇವಾ ಅವಧಿಯಲ್ಲಿ ಸಾವಿರಾರು ಮಂದಿ ಸೈನಿಕರಿಗೆ ತರಬೇತಿ ನೀಡಿದ ಹೆಗ್ಗಳಿಕೆ ಆ ವೀರಯೋಧನದ್ದು. ಊರಿನ ಜನರು-ಸ್ನೇಹಿತರು-ಹಿತೈಷಿಗಳ ಜತೆಯೂ ಉತ್ತಮ ಬಾಂಧವ್ಯವನ್ನ ಹೊಂದಿದ್ದ ಶೇಷಪ್ಪನವರ ಸಾವನ್ನ ಯಾರೂ ಊಹೆ ಕೂಡ ಮಾಡಿರಲಿಲ್ಲ.

 

 

 

ವಿಪರ್ಯಾಸ ಅಂದ್ರೆ ಕಾಫಿನಾಡಿನ ಈ ಯೋಧ ಭಾರತಾಂಭೆಯ ಸೇವೆ ಮಾಡ್ಬೇಕು ಅಂತಾ ಸೇನೆಗೆ ಸೇರಿ ಬರೋಬ್ಬರಿ 20 ವರ್ಷಗಳು ಆಗಿತ್ತು. ಇನ್ನೂ 2 ತಿಂಗಳು ಕಳೆದಿದ್ರೆ ಮುಂದಿನ ಜನವರಿಯಲ್ಲಿ ನಿವೃತ್ತಿ ತಗೊಂಡು ತವರಿಗೆ ಮರಳುವ ಸಮಯವೂ ನಿಗದಿ ಆಗಿತ್ತು. ಆದ್ರೆ ವಿಧಿ ಮಾತ್ರ ವೀರಯೋಧನ ಕನಸಿಗೆ ಅವಕಾಶವನ್ನೇ ಮಾಡಿಕೊಡಲಿಲ್ಲ. ದೀಪಾವಳಿಗೆ ಬರ್ತೇನೆ ಅಂದಿದ್ದ ಇಬ್ಬರು ಮಕ್ಕಳ ಮುದ್ದಿನ ಅಪ್ಪ, ಭಾರತಾಂಭೆಯ ಹೆಮ್ಮೆಯ ಪುತ್ರ ಹುಟ್ಟೂರಿಗೆ ಮರಳಿದ್ದು ಹುತಾತ್ಮನಾಗಿ ಅನ್ನೋದು ಬೇಸರದ ವಿಚಾರ .

 

 

 

ಈ ಮಧ್ಯೆ ವೀರಯೋಧ ಶೇಷಪ್ಪನವರ ಜಮೀನಿನಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯ್ತು. ಅಪ್ಪನ ಅಂತಿಮ ವಿಧಿ-ವಿಧಾನವನ್ನ 11 ವರ್ಷದ ಮಗ ಹರ್ಷ ಕಣ್ಣೀರಿಡುತ್ತಲೇ ನೆರವೇರಿಸಿದ್ದು, ನೆರೆದಿದ್ದವರನ್ನ ಕಣ್ಣಾಲಿಗಳನ್ನ ತೇವವಾಗಿಸಿತು. ಕೊನೆಗೆ ಶೇಷಪ್ಪನವರ ಪಾರ್ಥೀವ ಶರೀರಕ್ಕೆ ಹೊದಿಸಿದ ರಾಷ್ಟ್ರಧ್ವಜವನ್ನ ವೀರಯೋಧ ಶೇಷಪ್ಪನವರ ಪತ್ನಿ ಛಾಯರವರಿಗೆ ನೀಡಲಾಯ್ತು. ರಾಷ್ಟ್ರಧ್ವಜವನ್ನ ಕಣ್ಣಿಗೆ ಒತ್ತಿಕೊಂಡ ದೃಶ್ಯ ಮನಕಲಕುವಂತಿತು. ಆ ಬಳಿಕ ವೀರಯೋಧನ ಪುತ್ರ ಅಪ್ಪನ ಚಿತೆಗೆ ಭಾರವಾದ ಮನಸ್ಸಿನಿಂದಲೇ ಅಗ್ನಿಸ್ಪರ್ಶ ಮಾಡಿದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೂರು ಸುತ್ತು ಕುಶಾಲತೋಪು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥೀವ ಶರೀಕರಕ್ಕೆ ಅಂತಿಮ ನಮನ ಸಲ್ಲಿಸಲಾಯ್ತು. ವಿಧಾನಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಶಾಸಕ ಬೆಳ್ಳಿ ಪ್ರಕಾಶ್, ಮಾಜಿ ಶಾಸಕ ವೈಎಸ್ ವಿ ದತ್ತಾ, ಎಸ್ಪಿ, ಡಿಸಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!