May 17, 2024

MALNAD TV

HEART OF COFFEE CITY

ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

1 min read

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿರುವ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಸಭ್ಯಸ್ಥರಂತೆ ಮುಖವಾಡ ಧರಿಸಿರುವ ಗೋಮುಖ ವ್ಯಕ್ತಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಆರೋಪಿಸಿದರು.ಅವರು ಇಂದು ನಗರದ ಹನುಮಂತಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
 
ಅಧಿಕಾರ ಕಳೆದುಕೊಂಡಮೇಲೆ ಅರಗ ಜ್ಞಾನೇಂದ್ರಗೆ ನೆನಪಿನ ಶಕ್ತಿ ಕಳೆದುಹೋಗಿದೆ, ಕಸ್ತೂರಿ ರಂಗನ್ ವರದಿ ಬಗ್ಗೆ ಈ ರಾಜ್ಯದ ಅರಣ್ಯ ಸಚಿವ ಈಶ್ವರಖಂಡ್ರೆ ಅವರು ಏನು ಹೇಳಿದ್ದಾರೆ ಎಂಬುದನ್ನು ಅರಿಯದೆ ಯಾರೋ ಹೇಳಿರುವುದನ್ನು ಕೇಳಿ ಕಸ್ತೂರಿ ರಂಗನ್ ವರದಿ ಬಗ್ಗೆ ಸಚಿವ ಖಂಡ್ರೆ ಅವರಿಗೆ ಏನು ಮಾಹಿತಿ ಇದೆ ಎಂಬ ಉದಾಹರಣೆ ಕೊಡುವ ರಭಸದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ದಲಿತ ನಾಯಕ ದೀನ ದಲಿತರ ಹೋರಾಟಗಾರ ಹಿರಿಯ ಮುತ್ಸದ್ದಿ ಬಗ್ಗೆ ಬಣ್ಣದ ಮಾತನಾಡಿರುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಟೀಕಿಸಿದರು.
ಈಶ್ವರ ಖಂಡ್ರೆ ಅವರು ಕೇವಲ ಸಚಿವರಲ್ಲ, ಇಡೀ ರಾಜ್ಯದ ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷರಾಗಿದ್ದಾರೆ, ಖರ್ಗೆ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಮಾತ್ರವಲ್ಲ ಇಡೀ ದೇಶದ ದಲಿತ ನಾಯಕರಾಗಿದ್ದಾರೆ. ಈ ಇಬ್ಬರು ಪ್ರಮುಖ ನಾಯಕರ ಬಗ್ಗೆ ಬಿಜೆಪಿ ಮುಖಂಡರು ಅವಹೇಳನಕಾರಿಯಾಗಿ ಮಾತನಾಡಿರುವುದು ಮನಸ್ಸಿನಲ್ಲಿರುವುದು ಬಾಯಲ್ಲಿ ಬಂದಿದೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರ ಮನಸ್ಥಿತಿ ಇಂದು ವೀರಶೈವ, ದಲಿತ ವಿರೋಧಿ ನೀತಿ ಎದ್ದುಕಾಣುತ್ತಿದೆ. ಇದನ್ನು ಮಾಜಿ ಸಚಿವ ಅರಗ ಜ್ಞಾನೇಂದ್ರನ ಮೂಲಕ ಹೇಳಿಸಿದ್ದಾರೆ, ಇದಕ್ಕೆ ನಮ್ಮ ಸಮಾಜ, ದಲಿತ ಸಮಾಜ, ಜಿಲ್ಲಾ ಕಾಂಗ್ರೆಸ್, ವಿವಿಧ ದಲಿತಪರ ಸಂಘಟನೆಗಳು ಖಂಡಿಸಬೇಕಾಗಿದೆ. ಹಿಂದೆ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಕಸ್ತೂರಿರಂಗನ್ ವರದಿ ಜಾರಿಗೆ ಕೊಡುವಾಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿ ಬಿಜೆಪಿ ಸರ್ಕಾರದಲ್ಲಿ ಆನಂದ್‍ಸಿಂಗ್ ರವರು ಅರಣ್ಯ ಸಚಿವರಾಗಿದ್ದಾಗ ಪಶ್ಚಿಮ ಘಟ್ಟದವರಲ್ಲ ಎಂದು ತಿಳಿದಿರಲಿಲ್ಲವೇ ಎಂದು ದೂರಿದರು.
 
ಅರಗ ಜ್ಞಾನೇಂದ್ರ ಭುಜದ ಮೇಲೆ ಕೂರಿಸಿ ಸಂಘ ಪರಿವಾರ ಮತ್ತು ಆರ್‍ಎಸ್‍ಎಸ್ ಗುಂಡು ಹಾರಿಸಿದೆ, ದಲಿತರ, ಲಿಂಗಾಯಿತರ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂಬುದು ಕಳೆದ 5 ವರ್ಷದ ಆಡಳಿತಾವಧಿಯಲ್ಲಿ ನಡೆಸಿದ ಅಧಿಕಾರ ಈ ಘಟನೆಗೆ ಸಾಕ್ಷಿಯಾಗಿದೆ. ಜಿಲ್ಲೆ ಮತ್ತು ರಾಜ್ಯದ ಜನ ಕಳೆದ ಚುನಾವಣೆಯಲ್ಲಿ ಸರಿಯಾಗಿ ಬುದ್ದಿ ಕಲಿಸಿದರೂ ಪಾಠ ಕಲಿತಿಲ್ಲ, ಇದೇ ಚಾಳಿ ಮುಂದುವರೆಸಿದರೆ ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ತಕ್ಕ ಉತ್ತರ ಕೊಡುತ್ತೇವೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ ಮಾತನಾಡಿ ಮಾನವ ಕುಲ ತಲೆ ತಗ್ಗಿಸುವ ಹೀನ ಕೆಟ್ಟ ಸಂಸ್ಕøತಿಯನ್ನು ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಹಬ್ಬಿಸುವ ಕೆಲಸ ಮಾಡುತ್ತಿದೆ. ಒಂದು ಕಡೆ ನಾಗರೀಕರನ್ನು ಅಮಾನೀಯವಾಗಿ ಕೊಲೆ ಮಾಡಿದರೆ ಇನ್ನೊಂದು ಕಡೆ ಮಹಿಳೆಯರನ್ನು ಬೆತ್ತಲೆಗೊಳಿಸಿ ಬಿಜೆಪಿ ಬೆಂಬಲಿತರು ಸಾಮೂಹಿಕ ಹತ್ಯಾಚಾರ ಮಾಡಿ ಹತ್ಯೆ ಮಾಡುತ್ತಿರುವುದು ವಿಶ್ವ ಮಟ್ಟದಲ್ಲಿ ಭಾರತೀಯರೆಂದರೆ ಕೀಳುಮಟ್ಟದವರು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಹಿಂದೂ ಸಂಸ್ಕøತಿ ವಿರುದ್ಧವಾಗಿ ಬಿಜೆಪಿ ತನ್ನ ನಡೆಯನ್ನು ಇಡುತ್ತಿದೆ. ಮೊನ್ನೆ ನಡೆದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಕ್ಯಾಬಿನೆಟ್ ಉಪ ಸಮಿತಿಯನ್ನು ರಚಿಸಲಾಗಿದೆ, ಇದರ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ ಆದರೆ ಬಿಜೆಪಿಯ ಅರಗ ಜ್ಞಾನೇಂದ್ರ ತಮ್ಮ ತೆವಲಿಗೆ ಬೇಕಾದ ಹಾಗೆ ನಾಲಿಗೆಯನ್ನು ಹರಿಬಿಟ್ಟಿದ್ದಾರೆ ಎಂದು ದೂರಿದರು.
 
ಜನವಿರೋಧಿ ನಡೆಯನ್ನು ಮುಂದುವರೆಸುತ್ತಿದ್ದ ಬಿಜೆಪಿಯವರಿಗೆ ಕಾನೂನು ವ್ಯಾಪ್ತಿಯಲ್ಲಿ ಸೊಂಟ ಮುರಿಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಾರೆ ಎಂದು ಎಚ್ಚರಿಸಿದ ಅವರು ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನ ಮಾಡಿರುವ ಅರಗ ಜ್ಞಾನೇಂದ್ರಗೆ ದಿಕ್ಕಾರ ಕೂಗಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಸೌಜನ್ಯದ ಸಜ್ಜನ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅರಗ ಜ್ಞಾನೇಂದ್ರ ಅವಹೇಳನವಾಗಿ ಮಾತನಾಡಿರುವುದು ಅವರ ಮೆದುಳಿಗೂ, ನಾಲಿಗೆಗೂ ಸಂಪರ್ಕ ಕಡಿತಗೊಂಡಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
 
ಕಸ್ತೂರಿ ರಂಗನ್ ವರದಿಗೂ, ಮಲ್ಲಿಕಾರ್ಜುನ ಖರ್ಗೆಯವರ ಬಣ್ಣಕ್ಕೂ ಏನು ಸಂಬಂಧವಿದೆ ಎಂದು ಅರಿಯದೆ ಮಾತನಾಡಿರುವ ಅರಗ ಜ್ಞಾನೇಂದ್ರಗೆ ಬಿಜೆಪಿ ಮುಖಂಡರೇ ಅವಾಚ್ಯವಾಗಿ ನಿಂಧಿಸುತ್ತಿದ್ದಾರೆ. ಮಣಿಪುರ ಘಟನೆ ಮತ್ತು ಬೇರೆ ಬೇರೆ ಭಾಗಗಳಲ್ಲಿ ನಡೆದ ಕೋಮುಗಲಭೆ ಕುರಿತು ಏಕೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು. 
ಸಂಸದೆ ಶೋಭಾ ಕರಂದ್ಲಾಜೆಯವರು ಕೇಂದ್ರ ಸಚಿವರೂ ಆಗಿದ್ದಾರೆ ಅವರೇಕೆ ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತವಾಗಿರುವ ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಚರ್ಚಿಸದೆ ಪುಕ್ಕಟೆ ಪತ್ರಿಕೆ ಹೇಳಿಕೆ ನೀಡುವುದನ್ನು ಬಿಡಲಿ ಎಂದು ಎಚ್ಚರಿಸಿದರು.
 
ಸೌಜನ್ಯ, ಸಜ್ಜನ ವ್ಯಕ್ತಿತ್ವದ ಕಿಮ್ಮನೆ ರತ್ನಾಕರ್ ಅವರನ್ನು ಸೋಲಿಸಿ ಈ ಅವಿವೇಕಿ ವ್ಯಕ್ತಿಯನ್ನು ಗೆಲ್ಲಿಸಿದ್ದೇವೆ ಎಂದು ತೀರ್ಥಹಳ್ಳಿ ಕ್ಷೇತ್ರದ ಜನತೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಮುಖಂಡರುಗಳಾದ ಕೆ.ವಿ.ಮಂಜುನಾಥ್, ಕೆ.ಮೊಹಮದ್, ಜೆ.ಬಿ.ಮಹೇಶ್, ತನೋಜ್ ನಾಯ್ಡ್, ಹಿರೇಮಗಳೂರು ರಾಮಚಂದ್ರ, ನಗರಸಭೆ ಸದಸ್ಯರುಗಳಾದ ಶದಾಬ್ ಅಲಂ ಖಾನ್, ಮುನೀರ್ ಅಹಮ್ಮದ್, ಖಲಂದರ್, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!