May 6, 2024

MALNAD TV

HEART OF COFFEE CITY

ಪ್ರತಿ ಗ್ರಾಮಪಂಚಾಯಿತಿಯಲ್ಲಿ ಕ್ಷಯ ರೋಗದ ಜಾಗೃತಿ: ಡಿಸಿ. ರಮೇಶ್

1 min read

ಚಿಕ್ಕಮಗಳೂರು-2025 ಕ್ಕೆ ಕ್ಷಯ ಮುಕ್ತ ಭಾರತವನ್ನಾಗಿಸುವ ಆಶಯವನ್ನು ಸರ್ಕಾರ ಹೊಂದಿದ್ದು ಆ ನಿಟ್ಟಿನಲ್ಲಿ ಪ್ರತಿ ಗ್ರಾಮಪಂಚಾಯಿತಿ ಹಂತದಲ್ಲೂ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸಲಹೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಸಹಯೋಗದಲ್ಲಿ ವಿಶ್ವ ಕ್ಷಯರೋಗ ದಿನದ ಅಂಗವಾಗಿ ತಾಲ್ಲೂಕು ಕಛೇರಿಯಿಂದ ಆರಂಭಗೊಂಡ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷಯರೋಗ ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಒಬ್ಬರಿಂದ ಒಬ್ಬರಿಗೆ ಕೆಮ್ಮು/ಸೀನಿನ ಮೂಲಕ ಗಾಳಿಯಿಂದ ಹರಡುತ್ತದೆ, ಸರಿಯಾದ ಪ್ರಮಾಣದಲ್ಲಿ ಸೂಕ್ತ ಕಾಲಾವಧಿಯಲ್ಲಿ ಔಷಧಿ ತೆಗೆದುಕೊಂಡಲ್ಲಿ ರೋಗವನ್ನು ಗುಣಪಡಿಸಬಹುದು. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಕ್ಷಯ ರೋಗದ ಬಗ್ಗೆ ಲಕ್ಷಣಗಳ ಅರಿವಿದ್ದರು ಸಕಾಲಕ್ಕೆ ಚಿಕಿತ್ಸೆ ಪಡೆಯುವಲ್ಲಿ ತಿಳುವಳಿಕೆ ಕಡಿಮೆ ಆ ನಿಟ್ಟಿನಲ್ಲಿ ಪ್ರತಿ ಗ್ರಾಮಪಂಚಾಯಿತಿಗಳಲ್ಲಿ ಕ್ಷಯ ರೋಗ, ಚಿಕಿತ್ಸೆ ಸೌಲಭ್ಯಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು. ಕೋವಿಡ್ ಸಮಯದಲ್ಲಿ ಕ್ಷಯರೋಗಿಗಳ ಸಂಖ್ಯೆಯು ಹೆಚ್ಚಳವಾಗಿದೆ ಜಿಲ್ಲೆ ಸೇರಿದಂತೆ ರಾಜ್ಯವನ್ನು ಕ್ಷಯಮುಕ್ತವಾಗಿಸಲು ನಾವೆಲ್ಲವರೂ ಮುಂದಾಗಬೇಕು ಎಂದು ಕರೆ ನೀಡಿದರು.ಜಿಲ್ಲೆಯಲ್ಲಿ ಪ್ರಸ್ತುತ 2022 ಜನವರಿಯಿಂದ ಒಟ್ಟು 446 ಕ್ಷಯರೋಗಿಗಳು ಪತ್ತೆಯಾಗಿದ್ದು ಅದರಲ್ಲಿ 18 ರೋಗಿಗಳು ಹೆಚ್.ಐ.ವಿ-ಕ್ಷಯ ಸೋಂಕುಳ್ಳವರಾಗಿದ್ದಾರೆ. ಸೂಕ್ತ ಕಾಲಾವಧಿಯಲ್ಲಿ ಔಷಧಿ ತೆಗೆದುಕೊಂಡಲ್ಲಿ ರೋಗವನ್ನು ಗುಣಪಡಿಸಬಹುದು ಎಂದು ತಿಳಿಸಿದರು.

ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ.ಎಸ್, ಕ್ಷಯರೋಗಕ್ಕೆ ಕಾರಣಗಳು, ಚಿಕಿತ್ಸೆ, ತಡೆಗಟ್ಟುವಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಆರೋಗ್ಯವಂತ ವ್ಯಕ್ತಿಗಳಿರಬೇಕು ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಮುಖ್ಯಅತಿಥಿಗಳಾಗಿದ್ದ ಚಿಕ್ಕಮಗಳೂರು ಲೋಕಾಯುಕ್ತದ ವಿಶೇಷ ಅಭಿಯೋಜಕ ವಿ.ಟಿ.ಥಾಮಸ್ ಮಾತನಾಡಿ, 45 ವರ್ಷಗಳ ಹಿಂದೆ ಹೆಚ್ಚಾಗಿದ್ದ ಕ್ಷಯರೋಗ ಪ್ರಕರಣಗಳು ಪ್ರಸ್ತುತ ದಿನಗಳಲ್ಲಿ ಕಡಿಮೆಯಾಗುತ್ತಿದ್ದು, ಇದರಲ್ಲಿ ವೈದ್ಯರ ಪಾತ್ರ ಮಹತ್ತರವಾದದ್ದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಮಾತನಾಡಿ ಕ್ಷಯರೋಗ ನಿರ್ಮೂಲನೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಆಂದೋಲನಾ ಹಮ್ಮಿಕೊಂಡಿದ್ದು, ಜನಸಾಮಾನ್ಯರಲ್ಲಿ ಟಿಬಿ ಕಾಯಿಲೆ ಹಾಗೂ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು, ಮನೆ ಮನೆಗಳಿಗೆ ತೆರಳಿ ಟಿ.ಬಿ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಲಾಗುವುದು ಎಂದರು.

ಶಾಲಾ-ಕಾಲೇಜುಗಳಲ್ಲಿ ಕ್ಷಯ ರೋಗ ಸಂಬಂಧಿತ ರಸಪ್ರಶ್ನೆ, ಪ್ರಬಂಧ, ಸ್ಪರ್ಧೆ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು. ಒಟ್ಟಾರೆ 2025 ರ ವೇಳೆ ದೇಶವನ್ನು ಕ್ಷಯಮುಕ್ತವಾಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸಲಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯನ್ನು ಕ್ಷಯಮುಕ್ತ ಗ್ರಾಮಪಂಚಾಯಿತಿಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲೆಯ 14 ಗ್ರಾಮಪಂಚಾಯಿತಿಗಳನ್ನು ಆಯ್ದು ಅರಿವು ಕಾರ್ಯಕ್ರಮ ಮೂಡಿಸಲಾಗುವುದು. ಕ್ಷಯ ರೋಗ ನಿರ್ಮೂಲನೆಗೆ ಶ್ರಮಿಸುತ್ತಿರುವ ವೈದ್ಯರು, ಕೆಮಿಸ್ಟ್ ಫಾರ್ಮಸಿಸ್ಟ್‍ಗಳನ್ನು, ಆರೋಗ್ಯ ಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬಾಲಕೃಷ್ಣ ಟಿ.ಪಿ, ಕ್ಷಯ ಮುಕ್ತ ಚಿಕ್ಕಮಗಳೂರು ಜಿಲ್ಲೆಯನ್ನು ನಿರ್ಮಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ಚಿಕ್ಕಮಗಳೂರು ತಾಲ್ಲೂಕು ಕಛೇರಿಯಿಂದ ಅಂಬೇಡ್ಕರ್ ಸಭಾಭವನದವರೆಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ವೈದ್ಯಕೀಯ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಶಿವರಾಮ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್, ಚಿಕ್ಕಮಗಳೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಮಲ್ಲೇನಹಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಶಶಿಕಲಾ, ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಟ್ರಸ್ಟ್‍ನ ರಾಜನರಸಯ್ಯ , ಜೆಸಿಐ ಅಧ್ಯಕ್ಷ ಗಿರಿಧರ ರಾಜ್ ಉಪಸ್ಥಿತರಿದ್ದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ಸ್ವಾಗತಿಸಿ, ಲಲಿತಾ ನಿರೂಪಿಸಿ, ಪ್ರಭು ವಂದಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!