May 5, 2024

MALNAD TV

HEART OF COFFEE CITY

ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ 2.70 ಕೋಟಿ .ಮೌಲ್ಯದ ವಸ್ತುಗಳ ವಶ -ಕೆ.ಎನ್.ರಮೇಶ್

1 min read

ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಸುಮಾರು 2.70 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಸೀರೆ, ಕುಕ್ಕರ್, ಮದ್ಯ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಗುರುವಾರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತರೀಕೆರೆ ಪಟ್ಟಣದ ಚೆಕ್ ಪೋಸ್ಟ್‍ನಲ್ಲಿ ಪಿಕ್ ವಾಹನದಲ್ಲಿ ಸಾಗಿಸುತ್ತಿದ್ದ 2,58,18,3388 ರೂ. ಬೆಲೆಯ 9.332 ಕೆಜಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 546 ಗ್ರಾಂ. ತೂಕದ ಒಂದು ಚಿನ್ನದ ಬಿಸ್ಕೆಟ್ ಸಹ ಇದೆ ಎಂದು ತಿಳಿಸಿದರು.ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಿದ್ದು, ಆಭರಣ ಸಾಗಿಸುತ್ತಿದ್ದವರ ಬಳಿ ಸಿಕ್ಕ ದಾಖಲೆಗಳಿಗೂ, ಆಭರಣಕ್ಕೂ ವ್ಯತ್ಯಾಸಗಳಿದ್ದ ಕಾರಣ ಅದನ್ನು ವಶಕ್ಕೆ ಪಡೆದು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೊಪ್ಪಿಸಲಾಗಿದೆ. ವಾಹನದ ಚಾಲಕ ಸೇರಿದಂತೆ ಇನ್ನಿಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.ಶೃಂಗೇರಿ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿ ಸೂಕ್ತ ದಾಖಲೆಗಳಿಲ್ಲದ ಒಟ್ಟು 1183 ಸೀರೆಗಳು ಹಾಗೂ 281 ಕುಕ್ಕರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಪೈಕಿ 666 ಸೀರೆಗಳನ್ನು ನಗರದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಎದುರಿನ ಜಯನಗರ ಬಡಾವಣೆಯಲ್ಲಿರುವ ಲಾಜಿಸ್ಟಿಕ್‍ವೊಂದರ ಗೋದಾಮಿನಲ್ಲಿ ವಶಕ್ಕೆ ಪಡೆಯಲಾಗಿದೆ. ಗುಜರಾತ್ ರಾಜ್ಯದ ಸೂರತ್‍ನ ಫ್ಯಾಕ್ಟರಿಯೊಂದು ಇದನ್ನು ಚಂದನ್ ಕುಮಾರ್ ಜೈನ್ ಎನ್ನುವವರ ಹೆಸರಿನಲ್ಲಿ ಕಳಿಸಿಕೊಟ್ಟಿದೆ. ಅದರಲ್ಲಿರುವ ಫೋನ್ ನಂಬರ್ ಮೂಲಕ ಆ ವ್ಯಕ್ತಿಯನ್ನು ಸಂಪರ್ಕಿಸಿದರೆ ಅದು ನಮಗೆ ಸಂಬಂಧಿಸಿದಲ್ಲ ಎಂದು ಉತ್ತರಿಸಿದ್ದಾರೆ ಎಂದರು.ಈ ಸೀರೆಗಳಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳಿಲ್ಲದಿರುವುದು ಹಾಗೂ ಯಾರೂ ತಮ್ಮದೆಂದು ಹೇಳಿಕೊಂಡು ಮುಂದೆ ಬಾರದ ಕಾರಣ ಅದನ್ನು ಸಹ ವಶಪಡಿಸಿಕೊಂಡು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೊಪ್ಪಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಇನ್ನು ಶೃಂಗೇರಿಯಲ್ಲಿ 236 ಸೀರೆಗಳು, 281 ಕುಕ್ಕರ್‍ಗಳು, ಹಾಗೂ 181 ಫ್ಯಾನ್ ಇನ್ನಿತರೆ ವಸ್ತುಗಳು ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ.ಇದಕ್ಕೆ ಸಂಬಂಧಿಸಿದ ಜಿಎಸ್‍ಟಿ ನಂಬರ್ ಕೊಪ್ಪದ ಓರ್ವ ಡೀಲರ್‍ಗೆ ಸಂಬಂಧಿಸಿದ್ದಾಗಿದೆ. ಬಿಲ್ ಬೆಂಗಳೂರಿನ ವ್ಯಕ್ತಿ ಹೆಸರಿನಲ್ಲಿದೆ. ಅಲ್ಲದೆ ಜಿಎಸ್‍ಟಿ ಇಲ್ಲದೆ, ಸರಿಯಾದ ಬಿಲ್ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದ ವಸ್ತುಗಳನ್ನು ತೋಟದಲ್ಲಿ ದಾಸ್ತಾನಿಡುವುದು ಏಕೆ ಎನ್ನುವ ಪ್ರಶ್ನೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಅದರ ಮೇಲೆ ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಕಂಡು ಬಂದಿಲ್ಲ ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.ಮಾರ್ಚ್ 20 ರಿಂದ 23 ರ ವರೆಗೆ ಶೃಂಗೇರಿ ತಾಲ್ಲೂಕಿನಲ್ಲಿ 21984 ರೂ. ಬೆಲೆಯ 56.49 ಲೀಟರ್ ಮದ್ಯ ಹಾಗೆಯೇ ಮೂಡಿಗೆರೆ ತಾಲ್ಲೂಕಿನಲ್ಲಿ 21395 ರೂ. ಬೆಲೆಯ 49 ಲೀಟರ್, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 34304 ರೂ. ಮೌಲ್ಯದ 87 ಲೀಟರ್ ಮದ್ಯ, ತರೀಕೆರೆ ತಾಲ್ಲೂಕಿನಲ್ಲಿ 25181 ರೂ. ಮೌಲ್ಯದ 67 ಲೀಟರ್ ಮದ್ಯ ಹಾಗೂ ಕಡೂರು ತಾಲ್ಲೂಕಿನಲ್ಲಿ 28632 ರೂ.ನ 63 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.ಇದೇ ಅವಧಿಯಲ್ಲಿ ಶೃಂಗೇರಿ ತಾಲ್ಲೂಕಿನಲ್ಲಿ 5 ಸಾವರ ರೂ., ಮೂಡಿಗೆರೆ ತಾಲ್ಲೂಕಿನಲ್ಲಿ 40 ಸಾವಿರ ರೂ., ಚಿಕ್ಕಮಗಳೂರು ತಾಲ್ಲೂಕಿನಲ್ಲಿ 4.33 ಲಕ್ಷ ರೂ. ಮೌಲ್ಯದ ಗಾಂಜ ಮತ್ತು ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಳಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಿ.ಪ್ರಭು ಇದ್ದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!