May 19, 2024

MALNAD TV

HEART OF COFFEE CITY

ವೀರಶೈವ ಧರ್ಮ ವೃಕ್ಷಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ತಾಯ್ಬೇರು: ರಂಭಾಪುರಿ ಶ್ರೀ

1 min read

 

ಬಾಳೆಹೊನ್ನೂರು: ಅಂತರಂಗ ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟು ವೀರಶೈವ ಧರ್ಮ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದೆ. ವೀರಶೈವ ಧರ್ಮ ವೃಕ್ಷಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ತಾಯ್ಬೇರು ಆಗಿದ್ದಾರೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಬುಧವಾರ ಶ್ರೀ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೀರಶೈವ ಧರ್ಮ ಜೀವ ಶಿವನಾಗುವ ಅಂಗ ಲಿಂಗವಾಗುವ ದೇಹ ದೇಗುಲವಾಗುವ ಭವಿ ಭಕ್ತನಾಗುವ ಸಂಸ್ಕಾರ ನೀಡಿದೆ. ಜಾತಿ ಜ್ಯೋತಿಯಾಗಿಸುವ ಕರ್ಮ ಧರ್ಮವನ್ನಾಗಿಸುವ ಕಾಯಕ ಕೈಲಾಸವಾಗಿಸುವ ನೆಲ ಜಲಗಳನ್ನು ತೀರ್ಥ ಕ್ಷೇತ್ರಗಳನ್ನಾಗಿ ಪರಿವರ್ತಿಸುವ ವಿಶೇಷತೆ ಹೊಂದಿದೆ. ಅರ್ಚನೆಗಿಂತ ಅರ್ಪಣೆಗೆ, ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ, ದಾನಕ್ಕಿಂತ ದಾಸೋಹಕ್ಕೆ ವಿಶೇಷ ಒತ್ತು ಕೊಟ್ಟಿದೆ. ಆಸ್ತಿಗಿಂತ ಆಸಕ್ತಿಗೆ, ಅವಿಶ್ವಾಸಕ್ಕಿಂತ ಆತ್ಮ ವಿಶ್ವಾಸಕ್ಕೆ, ಆತ್ಮೋದ್ಧಾರಕ್ಕಿಂತ ಲೋಕೋದ್ಧಾರ ವಿಶಾಲ ಚಿಂತನೆಗಳನ್ನು ಬೋಧಿಸಿದೆ. ಜಾತಿ ಜಂಜಡಗಳನ್ನು ಕಳೆದು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಾಮರಸ್ಯ ಬೆಳೆಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಮಾದಿಗನಾದ ಮಾತಂಗನಿಗೆ ಶಿವದೀಕ್ಷೆಯಿತ್ತು ಮಾತಂಗ ಋಷಿಯನ್ನಾಗಿ ಪರಿವರ್ತಿಸಿದ ಹಿರಿಮೆ ರೇಣುಕಾಚಾರ್ಯರದ್ದಾಗಿದೆ. ಅವರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಸೂತ್ರಗಳು ಸಕಲರ ಬಾಳಿಗೆ ದಾರಿ ದೀಪವೆಂದ ಅವರು ಕ್ರಿಯಾಶೀಲ ದಕ್ಷತೆಗೆ ಹೆಸರಾದ ತುಮಕೂರು ಲೋಕಸಭಾ ಸದಸ್ಯರಾದ ಜಿ.ಎಸ್. ಬಸವರಾಜ ಅವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಿರುವುದು ತಮಗೆ ಸಂತೃಪ್ತಿಯನ್ನು ತಂದಿದೆ ಎಂದರು. ತುಮಕೂರು ನಗರದಲ್ಲಿ ಭವ್ಯ ಸುಂದರವಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರವನ್ನು ಕಟ್ಟಿ ಶ್ರೀ ಪೀಠಕ್ಕೆ ಸಮರ್ಪಣೆ ಮಾಡಲಿರುವುದು ಅವರಲ್ಲಿರುವ ಧರ್ಮ ನಿಷ್ಠೆ ಶ್ರದ್ಧೆಗೆ ಹಾಗೂ ಗುರು ಪೀಠ ಪರಂಪರೆಯಲ್ಲಿ ಇಟ್ಟ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿ ರೇಶ್ಮೆ ಶಾಲು ಫಲ ಪುಷ್ಪವಿತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿಯನ್ನು ಶ್ರೀ ಪೀಠದಿಂದ ಪ್ರದಾನ ಮಾಡಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜಗತ್ಕಲ್ಯಾಣಕ್ಕಾಗಿ ಶಾಂತಿ ಸಾಮರಸ್ಯ ನಿರ್ಮಾಣಕ್ಕಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊನಲುಪಾಕ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿದ ಪುಣ್ಯ ದಿನ. ಪರಶಿವನ ಸದ್ಯೋಜಾತ ಮುಖದಿಂದ ಅವತರಿಸಿದ ಪರಮಾಚಾರ್ಯರು. ಮಹಾಮುನಿ ಅಗಸ್ತ್ಯರಿಗೆ ಶಿವಜ್ಞಾನವನ್ನು ಬೋಧಿಸಿ ಉದ್ಧರಿಸಿದವರು. ಶ್ರೀ ವೀರಭದ್ರಸ್ವಾಮಿಯು ದುಷ್ಟರ ನಿಗ್ರಹ ಶಿಷ್ಟರ ಪರಿಪಾಲನೆ ಮಾಡಿಕೊಂಡು ಬಂದಿದ್ದಾನೆ. ತುಮಕೂರಿನ ಸಂಸದ ಜಿ.ಎಸ್. ಬಸವರಾಜ ಇವರಿಗೆ ಈ ವರ್ಷದ `ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ ಲಭಿಸಿರುವುದು ಸಂತೋಷ ಮೂಡಿಸಿದೆ. ಜಿ.ಎಸ್.ಬಸವರಾಜ ಇವರು ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಮಾಡುತ್ತಾ ಜನಾನುರಾಗಿಗಳಾಗಿದ್ದಾರೆ. ಭಕ್ತರ ಅಭ್ಯುದಯಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ರಾಜ್ಯ ಹೊರ ರಾಜ್ಯಗಳಲ್ಲಿ ಹಗಲಿರುಳೆನ್ನದೇ ಸಂಚರಿಸಿ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ. 66ನೇ ವಯಸ್ಸಿನಲ್ಲಿಯೂ ಅವರು ಧರ್ಮ ಜಾಗೃತಿಗಾಗಿ ಎಡೆಬಿಡದೇ ಸಂಚರಿಸುತ್ತಿರುವುದು ಭಕ್ತ ಸಂಕುಲಕ್ಕೆ ಸಂತೋಷ ಮೂಡಿಸಿದೆ. ಶಿಕ್ಷಣ ಪಡೆಯುವಲ್ಲಿ ಜಾತಿ ಮತ ಪಂಥಗಳ ಭೇದ ಬೇಡ. ನಾವೆಲ್ಲರೂ ಒಂದೇ ಎಂಬ ಭಾವದಿಂದ ಶಿಕ್ಷಣ ಪಡೆದು ಬರಬೇಕು. ದೇಶದ ಏಕತೆ ಸಮಗ್ರತೆಗೆ ಗಂಡಾಂತರ ತರುವ ಪ್ರಯತ್ನ ಅಲ್ಲಲ್ಲಿ ಕಂಡು ಬರುವುದು ನೋವಿನ ಸಂಗತಿ ಎಂದರು.

ಈ ದೇಶ ಸರ್ವ ಧರ್ಮದವರನ್ನು ಒಪ್ಪಿಕೊಂಡು ಮುನ್ನಡೆದಿದೆ. ಭಾರತೀಯ ಸಂಸ್ಕಾರ ಸಂಸ್ಕøತಿ ಉಳಿಸಿ ಬೆಳೆಸಲು ಮಠಗಳು ಹಿಂದೆಂದಿಗಿಂತ ಇಂದು ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ. ಎಲ್ಲರಲ್ಲೂ ಮಾನವೀಯ ಮೌಲ್ಯಗಳು ಬೆಳೆದು ಬರಲೆಂದರು.ಮುಖ್ಯ ಅತಿಥಿಯಾಗಿದ್ದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಎಂದ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳು ಧರ್ಮವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆದಾಗ ದೇಶದ ವ್ಯವಸ್ಥೆ ಸುಲಲಿತವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!