May 19, 2024

MALNAD TV

HEART OF COFFEE CITY

ನಿರಂತರ ಹುಲಿ ದಾಳಿಗೆ ರೈತರು ಕಂಗಾಲು.! ಹಸುಗಳೇ ಟಾರ್ಗೆಟ್..! ಹೇಳತೀರದಾಗಿದೆ ಕರುಗಳ ಮೂಕರೋಧನ..!

1 min read

ಚಿಕ್ಕಮಗಳೂರು: ಧರಣಿ ಮಂಡಲದ ಕಥೆಯನ್ನ ಯಾರು ತಾನೇ ಕೇಳಿಲ್ಲ ಹೇಳಿ.. ಮಾತಿಗೆ ತಕ್ಕಂತೆ ನಡೆದುಕೊಂಡ ಹಸುವಿನ ನಿಷ್ಠೆಯನ್ನ ನೋಡಿ ಹುಲಿಯೇ ಪ್ರಾಣಬಿಟ್ಟ ಕಥೆಯನ್ನ ನಾವೆಲ್ಲಾ ಕೇಳಿದ್ದೇವೆ. ಆದ್ರೆ ಈಗ ಕಾಲ ಬದಲಾಗಿದೆ ಪ್ಲೀಸ್ ಬಿಟ್ಬಿಡು, ಮನೆಯಲ್ಲಿ ಎರಡು ದಿನದ ಕರುವಿದೆ, ಹಾಲು ಕುಡಿಸಬೇಕು ಅಂದ್ರೂ ಕ್ರೂರ ವ್ಯಾಘ್ರ ಮಾತ್ರ ಗೋವನ್ನ ಬಿಡದೇ ಬೇಟೆಯಾಡುತ್ತಿದೆ. ಸದ್ಯ ಹುಲಿಯ ಓಡಾಟದಿಂದ ಕೇವಲ ದನಕರುಗಳು ಮಾತ್ರವಲ್ಲದೇ ಇಡೀ ಊರಿಗೆ ಊರೇ ಹುಲಿ ಭಯದಿಂದ ಕಂಗಾಲಾಗುವಂತಾಗಿದೆ..

ಪದೇ ಪದೇ ದನಕರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ಹೊಂಚು ಹಾಕು ಹಸುಗಳನ್ನೇ ಹೆಚ್ಚಾಗಿ ಬೇಟೆಯಾಡುತ್ತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತಿಭೈಲ್, ಹೊಕ್ಕಳ್ಳಿ, ಬಾನಹಳ್ಳಿ, ಹೊಸಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ಸಂಚಾರ ನಡೆಸುತ್ತಿರುವ ಹುಲಿ ಜನರಲ್ಲಿ ಹುಟ್ಟಿಸಿರುವ ಭಯ ಅಂತಿಂಥದಲ್ಲ. ನಿರಂತರ ಹುಲಿ ದಾಳಿಯಿಂದ ಈ ಗ್ರಾಮಗಳ ಜನರು ನಿದ್ರೆಯಲ್ಲೂ ಬೆಚ್ಚಿಬೀಳುವ ಪರಿಸ್ಥಿತಿ ಬಂದೊದಾಗಿದೆ. ಅಕ್ಕಪಕ್ಕದ ಹಳೇಹಳ್ಳಿ, ಬೆಳಗೋಡು, ತಳವಾರ, ಕೆಂಜಿಗೆ ಹೀಗೆ ಅನೇಕ ಗ್ರಾಮಗಳಲ್ಲೂ ವ್ಯಾಘ್ರದೇ ಭಯ. ವಾರಕ್ಕೆರಡು ಹಸುಗಳನ್ನ ಕೊಂದು ಹಾಕುತ್ತಿರುವ ಹುಲಿ, ಜನರನ್ನ ಅಕ್ಷರಶಃ ಬೆಚ್ಚಿ ಬೀಳಿಸಿದೆ. ನಿನ್ನೆ ಹೊಕ್ಕಳ್ಳಿಯ ಪ್ರಶಾಂತ್ ಎಂಬುವರಿಗೆ ಸೇರಿದ ಹಸುವನ್ನ ತಿಂದು ಹಾಕಿದೆ. ಪದೇ ಪದೇ ಹುಲಿ ದಾಳಿ ನಡೀತಿದ್ರೂ ಅರಣ್ಯ ಇಲಾಖೆ ಸಿಬ್ಬಂದಿಗಳು ತಲೆಕೆಡಿಸಿಕೊಂಡಿಲ್ಲ ಅಂತಾ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಭಾರತಿಬೈಲ್ ಅನುಸೂಯ ಎಂಬುವರ ಹಸು ಗದ್ದೆಯಲ್ಲಿ ಮೇಯುತ್ತಿದ್ದಾಗ ದಾಳಿ ಮಾಡಿದ ಹುಲಿ, ಹಸುವನ್ನ ಬಲಿ ತೆಗೆದುಕೊಂಡಿತ್ತು. ವ್ಯಾಘ್ರನಿಗೆ ಆಹಾರವಾಗುವ ಮುನ್ನ ಎರಡು ದಿನಗಳ ಹಿಂದೆಯಷ್ಟೇ ಮುದ್ದು ಕರುವಿಗೆ ಜನ್ಮ ನೀಡಿದ ಹಸುವನ್ನ ಕೊಂದ ವ್ಯಾಘ್ರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಹೆಚ್ಚಾಗಿ ಹಸುಗಳನ್ನೇ ಹುರಿಯಾಗಿಸಿಕೊಂಡು ಗದ್ದೆಯಲ್ಲಿ ಮೇಯುವಾಗ, ದನದಕೊಟ್ಟಿಗೆಯಲ್ಲಿದ್ದ ಹಸುಗಳನ್ನ ಹುಲಿ ಬೇಟೆಯಾಡುತ್ತಿದೆ. ತಾಯಿಯ ಪ್ರೀತಿ, ಆರೈಕೆ ಇಲ್ಲದೇ ಹೀಗೆ ಸಾಲು ಸಾಲು ಕರುಗಳು ಅನಾಥವಾಗ್ತಿವೆ. ದನಕರುಗಳು ಸೇರಿದಂತೆ ಹಸುಗಳನ್ನ ನಿರಂತರ ದಾಳಿ ಮಾಡಿ ಕೊಲ್ಲುತ್ತಿರುವುದರಿಂದ ಗ್ರಾಮದಲ್ಲಿ ದನದ ಕೊಟ್ಟಿಗೆಗಳು ಇದೀಗ ಜಾನುವಾರುಗಳಿಲ್ಲದೇ ಖಾಲಿ ಖಾಲಿಯಾಗುತ್ತಿದೆ.

ನಿರಂತರ ಹುಳಿ ದಾಳಿಯಿಂದ ಜನರು ಹಸುಕರುಗಳನ್ನ ಸಾಕದ ಪರಿಸ್ಥಿತಿ ಎದುರಾಗಿದೆ. ಹಾಲನ್ನ ಮಾರಿ ಜೀವನ ಸಾಗಿಸುತ್ತಿದ್ದ ಬಡ, ಮಧ್ಯಮವರ್ಗದ ಜನರು ಇದೀಗ ಹುಲಿ ದಾಳಿಯಿಂದ ಕಂಗಾಲಾಗಿ ಹೋಗಿದ್ದಾರೆ. ಈಗಾಗಲೇ ಅತಿಯಾದ ಮಳೆಯಿಂದ ಕಾಫಿ ಬೆಳೆಯನ್ನ ಕಳೆದುಕೊಂಡು ಅಲ್ಪಸ್ವಲ್ಪ ಬರುತ್ತಿದ್ದ ಹಾಲಿನ ಆದಾಯದಿಂದಲೇ ಜೀವನ ಸಾಗಿಸುತ್ತಿದ್ರು. ಆದರೆ ಇದೀಗ ಹುಲಿ ಈ ಭಾಗದಲ್ಲಿ ಬೀಡುಬಿಟ್ಟಿದ್ದರಿಂದ ಹಸುಗಳು ಕಣ್ಮರೆಯಾಗಿ ಜನರ ಆದಾಯಕ್ಕೂ ಕುತ್ತು ಬಿದ್ದಿದೆ. ಈ ರೀತಿ ಹುಲಿ ದಾಳಿ ನಿರಂತರವಾಗಿ ಆಗ್ತಿದ್ರೆ ನಾವು ಜೀವನ ಮಾಡೋದು ಹೇಗೆ ಅನ್ನೋ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಕಳೆದ ಒಂದು ವರ್ಷದಲ್ಲಿ 80-100 ಹಸುಗಳು ಈ ಭಾಗದಲ್ಲಿ ವ್ಯಾಘ್ರನ ಬಾಯಿಗೆ ಆಹಾರವಾಗಿದೆ. ಅಲ್ಲದೇ ಕಳೆದ ಎರಡು ತಿಂಗಳಲ್ಲೇ 30ಕ್ಕೂ ಹೆಚ್ಚು ಹಸುಗಳನ್ನ ಕಳೆದುಕೊಂಡಿರೋ ಜನರು ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದು, ಹುಲಿಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!