May 19, 2024

MALNAD TV

HEART OF COFFEE CITY

ಅನಧೀಕೃತವಾಗಿ ಕಟ್ಟಡ ನಿರ್ಮಾಣ, ಮುಲಾಜಿಲ್ಲದೇ ತೆರವು-ಸಿ.ಆನಂದ್

1 min read

ಚಿಕ್ಕಮಗಳೂರು-ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕಾನೂನು ನಿಯಮ ಉಲ್ಲಂಘಿಸಿ ಅನಧೀಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್.ಸಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಗರ ಸ್ಥಳೀಯ ಯೋಜನಾ ಪ್ರದೇಶಗಳ ವ್ಯಾಪ್ತಿಯಲ್ಲಿನ ಅನಧೀಕೃತ ಕಟ್ಟಡಗಳ ತೆರವುಗೊಳಿಸುವ ಸಂಬಂಧ ಸಿಡಿಎ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ನಗರವ್ಯಾಪ್ತಿಯಲ್ಲಿ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೇ ಅನಧೀಕೃತವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಕೆಲವೆಡೆ ಪ್ರಾಧಿಕಾರದಿಂದ ಪಡೆದ ಜಿಪ್ಲಸ್‍ಟು ಮಾದರಿಯ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆದು ಬಳಿಕ ಜಿಪ್ಲಸ್ ತ್ರಿ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ನೀಲಿನಕಾಶೆ ನಿಯಮವನ್ನು ಉಲ್ಲಂಘಿಸಿ ಅನಧೀಕೃತವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ತೆರವು ಮಾಡಲಾಗುವುದು ಎಂದು ಎಚ್ಚರಿಸಿದರು.
ವಾರ್ಡ್‍ಗಳ ಮೇಲುಸ್ತುವಾರಿ ವಹಿಸಿಕೊಂಡ ನಗರಸಭೆ ಅಧಿಕಾರಿಗಳು, ಕರವಸೂಲಿಗಾರರು, ಆರೋಗ್ಯ ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿ ಆಗ್ಗಾಗ್ಗೆ ಪರಿಶೀಲನೆ ನಡೆಸಬೇಕು. ನಿಯಮ ಮೀರಿ ಅನಧೀಕೃತವಾಗಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಕಾನೂನು ಚೌಕಟ್ಟಿನಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡಲ್ಲಿ ಅದಕ್ಕೆ ನಗರಸಭೆ ಹಾಗೂ ಸಂಪೂರ್ಣ ಸಹಕಾರ ನೀಡಲಿದೆ. ಬದಲಾಗಿ ಸರ್ಕಾರಿ ಕಂದಾಯ ಜಾಗ, ರಾಜಕಾಲುವೆ ಜಾಗವನ್ನು ಒತ್ತುವರಿ ಮಾಡಿದ್ದಲ್ಲಿ ಅಂತವರಿಗೆ ನೋಟಿಸ್‍ನೀಡಿ ದಂಡ ವಿಧಿಸಲಾಗುವುದು, ಯಾವುದೇ ಪ್ರಭಾವಿಗಳಾದರೂ ಮುಲಾಜಿಲ್ಲದೇ ಕ್ರಮವಹಿಸಲಾಗುವುದು ಈ ಸಂಬಂಧ ಸರ್ಕಾರದಿಂದಲೂ ಸುತ್ತೋಲೆ ಬಂದಿದೆ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ಮಾತನಾಡಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು, ವಾರ್ಡ್‍ಗಳಿಗೆ ನೇಮಿಸಿದ ನಗರಸಭೆ ಅಧಿಕಾರಿಗಳು, ವಾರ್ಡ್‍ಗೆ ಭೇಟಿ ನೀಡಿ ಅಲ್ಲಿನ ಕಟ್ಟಡ ನಿರ್ಮಾಣ, ಮತ್ತಿತ್ತರ ಸ್ವಚ್ಚತಾ ಕಾರ್ಯಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ನಗರಸಭೆಯನ್ನು ಮಾದರಿಯನ್ನಾಗಿಸಲು ಅಧಿಕಾರಿಗಳು ಖಡಕ್‍ಆಗಿ ಕಾರ್ಯನಿರ್ವಹಿಸಬೇಕು, ಆದರೆ ಕೆಲವು ಅಧಿಕಾರಿ ಸಿಬ್ಬಂದಿಗಳು ನಿರಾಸಕ್ತಿ ವಹಿಸಿ ಕೇವಲ ಸಂಬಳಕ್ಕೆ ಸೀಮಿತವಾಗಿದ್ದಾರೆ. ಕರ್ತವ್ಯದಲ್ಲಿ ಉಢಾಫೆ ತೋರುವ ಅಧಿಕಾರಿಗಳನ್ನು ಮುಲಾಜಿಲ್ಲದೇ ಅಮಾನತುಗೊಳಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳಿಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದರು ಯಾರೊಬ್ಬರು ಮುಂದಾಗಿಲ್ಲ, ನಗರದ ಎಂಜಿ ರಸ್ತೆಯಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದು ಇದುವರೆಗೂ ಪರಿಶೀಲನೆ ಮಾಡಿ ವರದಿ ನೀಡಿಲ್ಲ, ನಗರಸಭೆ ಅಧಿಕಾರಿ ವರ್ಗ ಕಾರ್ಯಪ್ರವೃತ್ತವಾಗಬೇಕು ಎಂದರು.

ನಗರಸಭೆಯಲ್ಲಿ ಆದಾಯ ಕುಂಠಿತವಾಗಿದ್ದು ನಗರದ ಅಭಿವೃದ್ಧಿ ನಿಟ್ಟಿನಲ್ಲಿ ಕಂದಾಯ ವಸೂಲಿ ನಿಗಧಿತ ಗುರಿಯನ್ನು ತಲುಪುವಂತೆ ತಿಳಿಸಿದರು. ಅನಧೀಕೃತವಾಗಿ ಒತ್ತುವರಿ ಮಾಡಿರುವ ಜಾಗವನ್ನು ನಗರಸಭೆ ಕಳೆದ ಒಂದು ತಿಂಗಳಿನಿಂದ ಕಾರ್ಯಾಚರಣೆ ಮೂಲಕ ತೆರವು ಮಾಡಲಾಗುತ್ತಿದೆ ಎಂದರು.
ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ನಗರದಲ್ಲಿ ಅನಧೀಕೃತವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಲ್ಲಿ ಅಂತವರಿಗೆ ನೋಟೀಸ್ ನೀಡಲಾಗಿದೆ. ಪ್ರಾಧಿಕಾರದಿಂದ ಪರವಾನಗಿ ಪಡೆದ ನೀಲಿ ನಕಾಶೆಗೆ ಅನುಗುಣವಾಗಿ ಕಟ್ಟಡ ನಿರ್ಮಿಸಬೇಕು, ಪಾರ್ಕಿಂಗ್ ವ್ಯವಸ್ಥೆ ಇರಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ ನಗರದ ಯಾವುದೇ ಭಾಗದಲ್ಲಿ ಅನಧೀಕೃತ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಪ್ರಾಧಿಕಾರ ಹಾಗೂ ನಗರಸಭೆ ನೀಲಿ ನಕಾಶೆಯ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವುದು ತಪ್ಪು. ಈ ನಿಟ್ಟಿನಲ್ಲಿ ವಾರ್ಡ್‍ಗಳಲ್ಲಿ ನೇಮಿಸಿರುವ ಕಂದಾಯ ಅಧಿಕಾರಿಗಳು, ಕರವಸೂಲಿಗಾರರು, ಆರೋಗ್ಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದ ಮೇಲಾಧಿಕಾರಿಗೆ ಮಾಹಿತಿ ನೀಡಬೇಕು, ಇಲ್ಲವಾದಲ್ಲಿ ಅದು ಅಧಿಕಾರಿ ಸಿಬ್ಬಂದಿಗಳ ಲೋಪವಾಗಲಿದೆ ಎಂದು ಎಚ್ಚರಿಸಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!