May 20, 2024

MALNAD TV

HEART OF COFFEE CITY

ಎರಡು ವರ್ಷ ಮಳೆ ಬಾರದಿದ್ರು ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ – ವರಸಿದ್ಧಿ ವೇಣುಗೋಪಾಲ್

1 min read

ಯಗಚಿ ಡ್ಯಾಮ್‌ನಿಂದ ಸಾಕಷ್ಟು ನೀರಿನ ಸಂಗ್ರಹ ಇರುವುದರಿಂದ ನಗರಕ್ಕೆ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಮುಂದಿನ ಎರಡು ವರ್ಷಗಳ ಕಾಲ ಮಳೆ ಬಾರದಿದ್ದರೂ ನಿರಂತರವಾಗಿ ನೀರು ಸರಬರಾಜು ಮಾಡಲು ಸಾಧ್ಯವಿದೆ. ಅಮೃತ್ ಯೋಜನೆಯಡಿ ದಿನ 24 ಗಂಟೆಗಳ ಕಾಲ ನೀರು ಪೂರೈಕೆ ಮಾಡುವ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಈ ಕಾಮಗಾರಿಗೆ ಕಾರ್ಯಾರಂಭ ಮಾಡಿದಲ್ಲಿ ನಗರದಲ್ಲಿ ನೀರು ಪೋಲಾಗುವುದಕ್ಕೆ ಸಂಪೂರ್ಣವಾಗಿ ತಡೆ ಬೀಳಲಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.
ಗುರುವಾರ ನಗರಸಭೆ ಸದಸ್ಯರಿಗೆ ಹಮ್ಮಿಕೊಂಡಿದ್ದ ನಗರಸಭೆ ಸಂಬಂಧಿಸಿದ ಕಸ ವಿಲೇವಾರಿ ಘಟಕ, ನಗರದ ರಾಮನಹಳ್ಳಿ, ಹೌಸಿಂಗ್ ಬೋರ್ಡ್ ನೀರು ಶುದ್ಧೀಕರಣ ಘಟಕ ಹಾಗೂ ಯಗಚಿ ಡ್ಯಾಮ್‌ನಿಂದ ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಸುವ ಪಂಪ್‌ಹೌಸ್‌ಗಳ ಕಾರ್ಯನಿರ್ವಹಣ ವ್ಯವಸ್ಥೆಗಳ ವೀಕ್ಷಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಬೇಲೂರು ಪಟ್ಟಣದಲ್ಲಿರುವ ಯಗಚಿ ಡ್ಯಾಮ್ 3.4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಬಾರದು ಎಂಬ ಕಾರಣಕ್ಕೆ ನೀರಿ ಲಭ್ಯತೆ, ಸಂಗ್ರಹದ ಮಾಹಿತಿ ತಿಳಿಯುವ ಉದ್ದೇಶದಿಂದ ನಗರಸಭೆ ಸದಸ್ಯರೊಂದಿಗೆ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಎರಡು ವರ್ಷಗಳ ಕಾಲ ಈ ಭಾಗದಲ್ಲಿ ಮಳೆಯಾಗದಿದ್ದರೂ ಚಿಕ್ಕಮಗಳೂರು ನಗರಕ್ಕೆ ಯಗಚಿ ಡ್ಯಾಮ್‌ನಿಂದ ನಿರಂತರವಾಗಿ ನೀರು ಪೂರೈಕೆ ಮಾಡುವಷ್ಟು ಡ್ಯಾಮ್‌ನಲ್ಲಿ ನೀರಿನ ಸಂಗ್ರಹವಿದೆ ಎಂದ ಅವರು, ಮುಂದಿನ ಎರಡು ವರ್ಷಗಳ ಕಾಲ ಚಿಕ್ಕಮಗಳೂರು ಭಾಗದಲ್ಲಿ ಮಳೆಯಾಗದಿದ್ದರೂ ನಗರದ ಸಾರ್ವಜನಿಕರಿಗೆ ನಿರಂತರವಾಗಿ ನೀರು ಪೂರೈಕೆ ಮಾಡಲು ನಗರಸಭೆ ಸಕಲ ಸಿದ್ಧತೆಗಳನ್ನೂ ಕೈಗೊಂಡಿದೆ ಎಂದರು.
ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆಸಿ ಡ್ಯಾಮ್‌ನಲ್ಲಿ ಲಭ್ಯ ಇರುವ ನೀರಿನ ಪ್ರಮಾಣ, ಸರಬರಾಜು ವ್ಯವಸ್ಥೆಯಲ್ಲಿನ ಎಲ್ಲ ಲೋಪಗಳನ್ನು ಸರಿಪಡಿಸಲಾಗುತ್ತಿದೆ ಎಂದ ಅವರು, ಚಿಕ್ಕಮಗಳೂರು ನಗರದಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಅಮೃತ್ ಯೋಜನೆಯಡಿ ವಾರದ 7 ದಿನಗಳಲ್ಲಿ 24 ಗಂಟೆಗಳ ಕಾಲವೂ ನೀರು ಪೂರೈಕೆ ಮಾಡುವ ಯೋಜನೆ ಶೇ.90ರಷ್ಟು ಭಾಗ ಪೂರ್ಣಗೊಂಡಿದ್ದು, ಈಗಾಗಲೇ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ನೀಡಲಾಗಿದೆ. ಸದ್ಯ ಮೀಟರ್ ಅಳವಡಿಕೆ ಕೆಲಸ ಅಂತಿಮ ಹಂತದಲ್ಲಿದ್ದು, ಮುಂದಿನ ಕೆಲ ತಿಂಗಳಲ್ಲಿ ನಿರಂತರವಾಗಿ ನೀರು ಪೂರೈಕೆ ಮಾಡಲಾಗುವುದು. ಮೀಟರ್ ಅಳವಡಿಕೆ ಬಳಿಕ ಸಾರ್ವಜನಿಕರು ವಿನಾಕಾರಣ ನೀರು ಪೋಲು ಮಾಡುವುದಕ್ಕೆ ಸ್ವತಃ ಕಡಿವಾಣ ಹಾಕುತ್ತಾರೆ. ಹೆಚ್ಚು ನೀರು ಬಳಸಿದಲ್ಲಿ ಹೆಚ್ಚು ಶುಲ್ಕ ಭರಿಸಬೇಕಾಗಿರುವುದರಿಂದ ಸಾರ್ವಜನಿಕರು ವಿನಾಕಾರಣ ನೀರು ಪೋಲು ಮಾಡುವುದಿಲ್ಲ. ಇದರಿಂದಾಗಿ ನೀರಿನ ಸೋರಿಕೆ ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.

 

ನಿರಂತರ ನೀರು ಸರಬರಾಜು ವ್ಯವಸ್ಥೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಧಿಕಾರಿಗಳು, ಸಿಬ್ಬಂದಿ ಕುಳಿತಲ್ಲೇ ಪಂಪ್‌ಹೌಸ್‌ಅನ್ನು ನಿಯಂತ್ರಣ ಮಾಡುವ ಹಾಗೂ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮರಗಳ ಮೂಲಕ ನೀರು ಸರಬರಾಜು ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿಯ ಕಾರ್ಯವೈಖರಿಯನ್ನು ವೀಕ್ಷಣೆ ಮಾಡುವಂತಹ ವ್ಯವಸ್ಥೆಯನ್ನೂ ನಗರಸಭೆ ಆಯುಕ್ತರ ಕಚೇರಿಯಲ್ಲೇ ಮಾಡಲಾಗಿದೆ ಎಂದರು.
ಚಿಕ್ಕಮಗಳೂರು ನಗರವನ್ನು ಮತ್ತಷ್ಟು ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ನಗರಸಭೆ ಪಣತೊಟ್ಟಿದೆ. ನಗರದಲ್ಲಿ ಸದ್ಯ ಮನೆಮನೆ ಕಸ ಸಂಗ್ರಹಣೆ ಕೆಲಸ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿದೆ. ಇಲ್ಲಿ ಸಂಗ್ರಹವಾದ ಕಸವನ್ನು ಇಂದಾವರ ಗ್ರಾಮದಲ್ಲಿರುವ ಕಸವಿಲೇವಾರಿ ಘಟಕದಲ್ಲಿ ಸಂಗ್ರಹಿಸಲಾಗುತ್ತಿದ್ದು, ಅಲ್ಲಿ ಹಸಿಕಸ ಮತ್ತು ಒಣ ಕಸ ವಿಂಗಡಣೆ ಮಾಡಲು ಯಂತ್ರೋಪಕರಣಗಳನ್ನು ಅಳವಡಿಸಿ ಕಸ ವಿಂಗಡಣೆ ಮಾಡಬೇಕಿದೆ. ಇದಕ್ಕಾಗಿ ಡಿಪಿಆರ್ ಸಲ್ಲಿಸಿದ್ದು, ಇದು ಮಂಜೂರಾತಿ ಹಂತದಲ್ಲಿದೆ. ಘಟಕ ಅನುಷ್ಠಾನಗೊಂಡಲ್ಲಿ ಅಲ್ಲಿ ಪ್ರತಿನಿತ್ಯ ಸುಮಾರು 70ಟನ್ ತ್ಯಾಜ್ಯ ವಿಂಗಡಣೆ ಮಾಡಲು ಸಾಧ್ಯವಾಗಲಿದೆ. ಸಂಗ್ರಹವಾದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಬೇರ್ಪಡಿಸಿ ಅದನ್ನು ಮರುಬಳಕೆ ಮಾಡಲು ಕಂಪೆನಿಗಳಿಗೆ ಮಾರಾಟ ಮಾಡಲಾಗುವುದು. ಇದರಿಂದ ನಗರಸಭೆಗೆ ಆದಾಯವೂ ಬರಲಿದೆ. ಜೊತೆಗೆ ನಗರದ ಸೌಂದರ್ಯ ಕಾಪಾಡಲು ಸಾಧ್ಯವಿದೆ ಎಂದರು.
ನಗರದಲ್ಲಿ ನೀರುಗಂಟಿಗಳ ನಿರ್ಲಕ್ಷ್ಯದಿಂದಾಗಿಯೇ ನೀರು ಪೋಲಾಗುತ್ತಿದೆ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆ ಅಧಿಕಾರಿಗಳು ನೀರುಗಂಟಿಗಳನ್ನು ನಮ್ಮ ಇಲಾಖೆ ವಶಕ್ಕೆ ನೀಡಿದಲ್ಲಿ ಎಲ್ಲ ಲೋಪಗಳನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು. ಯಗಚಿ ಡ್ಯಾಮ್‌ನಿಂದ ಚಿಕ್ಕಮಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳು ಸದಸ್ಯ ಸುಸ್ಥಿತಿಯಲ್ಲಿವೆ. ಈ ಹಿಂದೆ ಈ ಪೈಪ್‌ಲೈನ್‌ಗಳ ನಿರ್ವಹಣೆಯಲ್ಲಿ ಲೋಪದೋಷಗಳಿದ್ದವು. ನಮ್ಮ ಆಡಳಿತದಲ್ಲಿ ಇಂತಹ ಯಾವುದೇ ಲೋಪಗಳಿಲ್ಲ ಎಂದ ಅವರು, ಈ ಪೈಪ್‌ಲೈನ್‌ಗಳ ಬಾಳಿಕೆ ಅವಧಿ ಪೂರ್ಣಗೊಂಡಿರುವುದರಿಂದ ಮುಂದಿನ 100 ವರ್ಷಗಳ ಕಾಲ ಬಾಳಿಕೆ ಬರುವಂತಹ ಪೈಪ್‌ಲೈನ್ ಅಳವಡಿಕೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇದನ್ನೂ ಅನುಷ್ಠಾನಕ್ಕೆ ತರಲಾಗುವುದು. ನೀರು ಪೂರೈಕೆ ವ್ಯವಸ್ಥೆ ನಿರ್ವಹಣೆಗೆ ಬೇಕಾದಷ್ಟು ಹಣ ನಗರಸಭೆಯಲ್ಲಿದ್ದು, ಇದಕ್ಕಾಗಿ ಪ್ರತ್ಯೇಕ ಅನುದಾನ ಕೋರು ಸರಕಾರಕ್ಕೆ ಪ್ರಸ್ತಾವ ಸಲ್ಲಿಸುವ ಪ್ರಮೇಯವಿಲ್ಲ ಎಂದರು.
ಈ ವೇಳೆ ನಗರಸಭೆ ಆಯುಕ್ತ ಉಮೇಶ್, ಸದಸ್ಯರಾದ ಕವಿತಾಶೇಖರ್, ಇಂದಿರಾಶಂಕರ್, ಸಿ.ಎಂ.ಕುಮಾರ್, ರೂಪಕುಮಾರ್, ಗುರುಮಲ್ಲಪ್ಪ, ಮಂಜುಳಎಂ.ಕೆ, ಮಂಜುಳ.ಕೆ.ಆರ್, ಇಂಜಿನಿಯರ್ ಚಂದನ್, ರಶ್ಮಿ, ಲತಾಮಣಿ ಸೇರಿದಂತೆ ಇತರೆ ಸದಸ್ಯರು ಹಾಜರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!