ಕೌಟುಂಬಿಕ ಕಲಹದ ಕರಾಳ ಅಂತ್ಯ : ತವರು ಸೇರಿದ್ದ ಪತ್ನಿಯನ್ನೆ ಕೊಂದ ಪತಿ*
1 min read
ಚಿಕ್ಕಮಗಳೂರು: ಕೌಟುಂಬಿಕ ಕಲಹ ಒಂದು ಜೀವವನ್ನು ಬಲಿ ಪಡೆದ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಗಂಡನ ಮನೆ ಬಿಟ್ಟು ತವರು ಸೇರಿದ್ದ ಪತ್ನಿಗೆ ಆಕೆಯ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸಾವನ್ನಪ್ಪಿದ ದುರ್ದೈವಿ ಮಹಿಳೆಯನ್ನು 32 ವರ್ಷದ ನೇತ್ರಾ ಎಂದು ಗುರುತಿಸಲಾಗಿದೆ. ನೇತ್ರಾ ಅವರು ಐದು ತಿಂಗಳ ಹಿಂದಷ್ಟೇ ಸಕಲೇಶಪುರದ ನಿವಾಸಿ ನವೀನ್ ಎಂಬುವವರೊಂದಿಗೆ ವಿವಾಹವಾಗಿದ್ದರು. ಆದರೆ, ವಿವಾಹವಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ಕೌಟುಂಬಿಕ ಕಲಹ ಶುರುವಾಗಿತ್ತು. ಕಲಹವು ತೀವ್ರ ಸ್ವರೂಪ ಪಡೆದ ಕಾರಣ, ನೇತ್ರಾ ಅವರು ಸುಮಾರು ಮೂರು ತಿಂಗಳ ಹಿಂದೆ ಪತಿಯ ಮನೆಯನ್ನು ಬಿಟ್ಟು, ಹೊಸಳ್ಳಿ ಗ್ರಾಮದಲ್ಲಿರುವ ತಮ್ಮ ತವರು ಮನೆಗೆ ಮರಳಿದ್ದರು.
ಪತ್ನಿ ತವರು ಸೇರಿದ್ದರಿಂದ ಕೋಪಗೊಂಡಿದ್ದ ಪತಿ ನವೀನ್, ಹೇಗಾದರೂ ಮಾಡಿ ಅವಳನ್ನು ಹಿಂತಿರುಗಿಸುವ ಅಥವಾ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಭಾನುವಾರ ರಾತ್ರಿ ಹೊಸಳ್ಳಿ ಗ್ರಾಮದಲ್ಲಿರುವ ನೇತ್ರಾಳ ಮನೆಗೆ ಬಂದಿದ್ದಾನೆ. ರಾತ್ರಿ ಊಟ ಮುಗಿಸಿ ಮನೆಯ ಹೊರಗೆ ನಿಂತಿದ್ದ ನೇತ್ರಾಳನ್ನು ನವೀನ್ ಏಕಾಏಕಿ ತಡೆದು ಚಾಕುವಿನಿಂದ ಇರಿದು ತಕ್ಷಣವೇ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇತ್ರಾ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಆಲ್ದೂರು ಪೊಲೀಸ್ ಠಾಣೆಯ ಸಿಬ್ಬಂದಿ, ಹೆಚ್ಚಿನ ಸಮಯ ವ್ಯರ್ಥ ಮಾಡದೆ ತಮ್ಮದೇ ವಾಹನದಲ್ಲಿ ನೇತ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನೇತ್ರಾ ದಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭೀಕರ ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಆರೋಪಿ ನವೀನ್‌ನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಕೇವಲ ಐದೇ ತಿಂಗಳ ಮದುವೆಯ ಜೀವನ ಕೌಟುಂಬಿಕ ಕಲಹದ ಕಾರಣದಿಂದ ಇಂತಹ ದುರಂತ ಅಂತ್ಯ ಕಂಡಿರುವುದು ಹೊಸಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದ ಜನರಲ್ಲಿ ತೀವ್ರ ಬೇಸರ ಮತ್ತು ಆತಂಕ ಮೂಡಿಸಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

