ಮಲೆನಾಡಿನಲ್ಲಿ ಮತ್ತೆ ಅಬ್ಬರಿಸಿ ಬೊಬ್ಬಿರಿದ ವರುಣ ದೇವ : ಕೊಚ್ಚಿಹೋದ ಬದುಕು
1 min read
ಬಿಡುವು ನೀಡಿದ್ದ ಮಳೆರಾಯ ಮಲೆನಾಡಿನಲ್ಲಿ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದ ರಾತ್ರಿ ಜಿಲ್ಲೆಯ ಹಲವೆಡೆ ಆರ್ಭಟಿಸಿರುವ ವರುಣ ದೇವ ನೂರಾರು ಅವಾಂತರ ಗಳನ್ನು ಸೃಷ್ಟಿಸಿದ್ದಾನೆ. ಇತ್ತ ಭದ್ರೆ ಮೈದುಂಬಿ ಹರಿಯುತ್ತಿದ್ದು ಜಲಾಶಯದಿಂದ ನೀರು ಹೊರ ಬಿಡಲಾಗಿದೆ. ಅತ್ತ ತುಂಗೆಯ ಪ್ರವಾಹಕ್ಕೆ ನೆರೆಗೆ ಜನರು ತತ್ತರಿಸಿದ್ದಾರೆ. ಹಳ್ಳಕೊಳ್ಳಗಳು ಜಲಾವೃತವಾಗಿದ್ದು ಸಾವಿರಾರು ಎಕರೆ ಬೆಳೆ ನಾಶಗೊಂಡಿದೆ. ಚಾರ್ಮಾಡಿ ಘಾಟಿ ಸಂಚಾರ ದುರ್ಗಮವಾಗಿದ್ದು ಐದು ತಾಲೂಕುಗಳ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಕಾಫಿನಾಡ ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರಿಸುತ್ತಿದೆ. ಮೂರು ದಿನದಿಂದ ಸಂಪೂರ್ಣ ಬಿಡುವು ನೀಡಿದ್ದ ವರುಣದೇವ ಮತ್ತೆ ಆರ್ಭಟ ತೋರಿದ್ದಾನೆ. ಕಳೆದ ರಾತ್ರಿಯ ಭಾರೀ ಮಳೆಗೆ ಕೆಲವೆಡೆ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದ್ದು ಶೃಂಗೇರಿ ನೆಮ್ಮಾರು ಬಳಿ ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿರೋ ದೃಶ್ಯ ಕಂಡು ಬಂದಿದೆ. ತುಂಗಾ ನದಿ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಕೂಡಾ ಜಲಾವೃತಗೊಂಡಿದೆ. ಸೇತುವೆ ಮೇಲೆ ಸಂಚರಿಸಲು ಹೋಗಿ ಭಯಗೊಂಡು ಟಿಪ್ಪರ್ ಲಾರಿ ವಾಪಾಸ್ಸಾಗಿದೆ.
ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಮಳೆಗಾಲದಲ್ಲಿ ಇಂಥಾ ಮಳೆ ನೆರೆ ಇದೇ ಮೊದಲು ಎನ್ನಲಾಗುತ್ತಿದೆ. ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದ ಕೆರೆ ಏರಿ ಹೊಡೆದು
ನಾಟಿ ಮಾಡಿದ್ದ ಜಮೀನು ಜಲಾವೃತ ಗೊಂಡಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಮತ್ತೆ ಜಲಾವೃತ ಆಗಿದ್ದು ಅಂಗಡಿ ಮಳಿಗೆಗಳು ಹಾಗು ಭಾರತಿತೀರ್ಥ ರಸ್ತೆಯೂ ಮುಳುಗಡೆ
ಯಾಗಿದೆ ಮುನ್ನೆಚ್ಚರಿಕಾ ಕ್ರಮವಾಗಿ ನದಿಯತ್ತ ಜನರ ಓಡಾಟಕ್ಕೆ ನಿಷೇಧ ಹೇರಲಾಗಿದೆ. ತಾತ್ಕಾಲಿಕವಾಗಿ ಸುಮಾರು 20ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು ಕ್ಲೋಸ್ ಮಾಡಲಾಗಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಐದು ತಾಲೂಕಿನ ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮೂಡಿಗೆರೆ ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಅಂಗನವಾಡಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g