September 29, 2022

MALNAD TV |

HEART OF COFFEE CITY

ಮಲೆನಾಡಲ್ಲಿ ನಿಲ್ಲದ ಅವಾಂತರಗಳು, ಮಳೆಯಿಂದ ಬಿರುಕು ರಸ್ತೆ, ಬೆಳೆ ಹಾನಿಯಿಂದ ಬೇಸತ್ತು ರೈತ ಆತ್ಮಹತ್ಯೆ

 

 

 

 

 

ಚಿಕ್ಕಮಗಳೂರು : ಕಾಫಿನಾಡಿನ ಜನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಅನಾಹುತಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲಾದ್ಯಂತ ನಿನ್ನೆಯಿಂದ ಶೇಕಡ 80ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಬೆಟ್ಟ-ಗುಡ್ಡ ಕುಸಿಯುವುದು, ರಸ್ತೆ ಕಟ್ ಆಗುವುದು, ತೋಟಗಳ ಮಣ್ಣು ಜರಿಯುವುದು ಮಾತ್ರ ನಿಂತಿಲ್ಲ. ಕಳೆದೊಂದು ವಾರದಿಂದ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ವರುಣದೇವ ತಕ್ಕಮಟ್ಟಿಗೆ ಶಾಂತನಾಗಿದ್ದರೂ ಸುಮಾರು 20 ಮೀಟರ್ ಕಾಂಕ್ರೀಟ್ ರಸ್ತೆ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಬಳಿ ನಡೆದಿದೆ. ಕಲ್ಲತ್ತಿಗರಿಯಿಂದ ಕೆಮ್ಮಣ್ಣುಗುಂಡಿ ಸಂಪರ್ಕ ಕಲ್ಪಿಸುವ ಮಾರ್ಗದ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು ಭೂಮಿಯ ಸುಮಾರು 2 ಅಡಿಯಷ್ಟು ಕುಸಿದಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸಲು ಪ್ರವಾಸಿಗರು ಕಂಗಾಲಾಗಿದ್ದಾರೆ. ಕೆಲ ಪ್ರವಾಸಿಗರು ಸಂಚರಿಸಲು ಭಯಪಟ್ಟು ವಾಪಸ್ಸಾಗಿದ್ದಾರೆ. ಒಂದು ವೇಳೆ ಬಾಯ್ಬಿಟ್ಟಿರೋ ಈ ಮಾರ್ಗ ಕುಸಿದರೆ ಕೆಮ್ಮಣ್ಣುಗುಂಡಿ ಹಾಗೂ ಹೆಬ್ಬೆ ಜಲಪಾತಕ್ಕೆ ಹೋಗುವ ಪರ್ಯಾಯ ಮಾರ್ಗವೂ ಇಲ್ಲದಿರುವುದರಿಂದ ಸ್ಥಳಿಯರು ಹಾಗೂ ಪ್ರವಾಸಿಗರಿಗೆ ತೀವ್ರ ತೊಂದರೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿರೋ ಅಧಿಕಾರಿಗಳು 20 ಅಡಿ ಅಗಲದ ರಸ್ತೆಯಲ್ಲಿ ರಸ್ತೆ ಕುಸಿದಿರುವ ಜಾಗಕ್ಕೆ 10 ಅಡಿ ಅಗಲ ರೇಡ್ ಟೇಪ್ ಕಟ್ಟಿ, ಕೇವಲ 10 ಅಡಿ ಜಾಗದಲ್ಲೇ ವಾಹನಗಳು ಸಂಚರಿಸುವಂತೆ ಸೂಚನೆ ನೀಡಿದ್ದಾರೆ.

ಮಳೆಯಿಂದ ರೈತ ಆತ್ಮಹತ್ಯೆ :

 

ಕಳೆದ 8-10 ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳೆ ಹಾಳಾಗಿದೆ ಸಾಲ ತೀರಿಸುವುದು ಹೇಗೆಂದು ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರು ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನ 38 ವರ್ಷದ ಗಣೇಶ್ ಎಂದು ಗುರುತಿಸಲಾಗಿದೆ. ಮೃತ ಗಣೇಶ್ ತಮಗಿರುವ ನಾಲ್ಕು ಎಕರೆ ಜಮೀನನ್ನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಯಪುರದ ಕರ್ನಾಟಕ ಬ್ಯಾಂಕಿನಲ್ಲಿ 2 ಲಕ್ಷ ಸಾಲ, ಪಿ.ಎ.ಸಿ.ಎಸ್.ನಲ್ಲಿ 45 ಸಾವಿರ ಹಾಗೂ ಕೈ ಸಾಲ ಮಾಡಿದ್ದರು. ಕಳೆದ 8-10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ, ಅಡಿಕೆ ಹಾಗೂ ಮೆಣಸು ಬೆಳೆ ಸಂಪೂರ್ಣ ಹಾಳಾಗಿತ್ತು. ಸಾಲ ತೀರಿಸುವುದು ಹೇಗೆಂದು ಚಿಂತಿತನಾಗಿದ್ದ ಗಣೇಶ್ ಮೈಲುತುತ್ತು (ಕಾಫಿಗೆ ಸಿಂಪಡಿಸುವ ಕೀಟನಾಶಕ) ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿ ಮೈಲು ತುತ್ತು ಸೇವಿಸಿ ವಾಂತಿ ಮಾಡುತ್ತಿದ್ದ ಗಣೇಶ ನನ್ನ ತಾಯಿ ಕಂಡು ಪತಿಗೆ ವಿಷಯ ಮುಟ್ಟಿಸಿದ್ದರು. ಕೂಡಲೇ ಗಣೇಶನನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಕೊಪ್ಪದಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಮೃತ ಗಣೇಶ್ ತಂದೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸಾಲದಿಂದ ಸದಾ ಚಿಂತಿತನಾಗಿದ್ದ ನನ್ನ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ದೂರು ನೀಡಿದ್ದಾರೆ. ಕಳೆದ ವರ್ಷ ಮೃತ ಗಣೇಶ್ ಪತ್ನಿ ಕೂಡ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದೀಗ ತಂದೆಯು ಸಾವನಪ್ಪಿದ್ದರಿಂದ ಒಂಬತ್ತು ವರ್ಷದ ಬಾಲಕ ಹಾಗೂ ಐದು ವರ್ಷದ ಬಾಲಕಿ ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ಅನಾಥರಾಗಿದ್ದಾರೆ.

ಮಳೆಯಿಂದ ಕುಸಿದ ಶಾಲೆ ಗೋಡೆ :

 

ಮಲೆನಾಡಲ್ಲಿ ಸುರಿದ ಮಳೆಯಿಂದ ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಶಾಲೆ ಗೋಡೆ ಕುಸಿತವಾಗಿದೆ. 26 ಮಕ್ಕಳು ವ್ಯಾಸಾಂಗ ಮಾಡುತ್ತಿರೋ ಪ್ರಾಥಮಿಕ ಶಾಲೆಯ ಗೋಡೆ ಕುಸಿತವಾಗಿತ್ತು, ಶಾಲೆ ಬಿದ್ದ ಪರಿಣಾಮ ವಿದ್ಯಾರ್ಥಿಗಳ ಪರದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.

ಮಳೆಯ ಅಬ್ಬರಕ್ಕೆ ಸಾಲು-ಸಾಲು ಮನೆಗಳು ಕುಸಿತ :

 

 

ಮಳೆಯ ಆರ್ಭಟಕ್ಕೆ ಮೂಡಿಗೆರೆ ತಾಲೂಕಿನ ದಿಣ್ಣೆಕೆರೆಯಲ್ಲಿ ಒಂದು ಮನೆ ನೆಲಸಮವಾಗಿದೆ. ಗ್ರಾಮದ ದಿನೇಶ್ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ನಾಶವಾಗಿದ್ದು ಕುಟುಂಬ ಕಣ್ಣೀರಲ್ಲೇ ಬದುಕು ಪರಿಸ್ಥಿತಿ ನಿರ್ಮಾಣ ವಾಗಿದೆ. ಮನೆಯ ಅವಶೇಷಗಳ ಅಡಿ ಆಹಾರ ಸಾಮಗ್ರಿ ಹುಡುಕುವ ಮನಕಲಕುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಕೂಡಿಟ್ಟ ಹಣ ಹಾಗೂ ಆಹಾರ ಸಾಮಗ್ರಿಗಾಗಿ ಹುಡುಕಾಟ ಮಾಡುವ ದೃಶ್ಯ ಸೆರೆಯಾಗಿದೆ.

ಇನ್ನು ಕಳಸ ತಾಲೂಕಿನ ಕೆಳಗೂಡು ಗ್ರಾಮದಲ್ಲಿ ಹರೀಶ್ ಎಂಬುವರ ಮನೆ ಮೇಲ್ಚಾವಣಿ, ಗೋಡೆ ಕುಸಿತವಾಗಿದೆ. ತರೀಕೆರೆ ತಾಲೂಕಿನಲ್ಲೂ ಮತ್ತೆ ಮೂರು ಮನೆಗಳ ಗೋಡೆ ಕುಸಿತವಾಗಿದ್ದು ಬಾವಿಕೆರೆ ಗ್ರಾಮದ ಬಸಪ್ಪ ಹಾಗೂ ಗಂಗಣ್ಣ ಎಂಬವರಿಗೆ ಸೇರಿದ ಮನೆಗಳಿಗೆ ಹಾನಿ ಉಂಟಾಗಿದೆ‌. ಬಿ.ರಾಮನಹಳ್ಳಿ ಗ್ರಾಮದ ದುರ್ಗಮ್ಮ ಎಂಬುವರ ಮನೆ ಗೋಡೆಯೂ ಹಾನಿಯಾಗಿದೆ..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

error: Content is protected !!